ಚಿಕ್ಕಮಗಳೂರು : ಬೇಲೂರು :ವರಸಿದ್ದಿ ಶ್ರೀ ವಿನಾಯಕ ದೇವಾಲಯದ ಗಣೇಶ ವಿಗ್ರಹಕ್ಕೆ ಚಪ್ಪಲಿ ಇಟ್ಟು ಅಪವಿತ್ರಗೊಳಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಇಂದು ದೇವಾಲಯದಲ್ಲಿ ಧಾರ್ಮಿಕ ಶುದ್ದೀಕರಣ ಕಾರ್ಯ ನಡೆಯಿತು. ಶಾಸಕರಾದ ಎಚ್.ಕೆ. ಸುರೇಶ್ ಅವರ ನೇತೃತ್ವದಲ್ಲಿ ಗಣೇಶ ವಿಗ್ರಹಕ್ಕೆ ಹಾಲು, ಮೊಸರು, ತುಪ್ಪ, ಹಣ್ಣುಗಳಿಂದ ಅಭಿಷೇಕ ನೆರವೇರಿಸಲಾಯಿತು.
ಅಭಿಷೇಕದ ಬಳಿಕ ದೇವಾಲಯದ ಮುಂಭಾಗ ಹೋಮಕುಂಡದಲ್ಲಿ ಹೋಮ–ಹವನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೇದಮಂತ್ರಗಳ ನಡುವೆ ಪೂಜೆ ಹಾಗೂ ಹೋಮ ಪದಾರ್ಥಗಳನ್ನು ಅರ್ಪಿಸುವ ಮೂಲಕ ದೇವಾಲಯ ಶುದ್ದೀಕರಣ ಕಾರ್ಯ ಕೈಗೊಳ್ಳಲಾಯಿತು.
ಈ ಧಾರ್ಮಿಕ ವಿಧಿವಿಧಾನಗಳಲ್ಲಿ ಶಾಸಕರೊಂದಿಗೆ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಭಕ್ತರು ಭಾಗವಹಿಸಿದರು. “ದೇವರ ಪ್ರತಿಮೆಗೆ ಚಪ್ಪಲಿ ಇಟ್ಟು ನಡೆದ ಅವಮಾನ ಭಕ್ತರ ಹೃದಯಕ್ಕೆ ನೋವುಂಟುಮಾಡಿದೆ. ದೇವಾಲಯದ ಪಾವಿತ್ರ್ಯ ಕಾಪಾಡಲು ಶುದ್ದೀಕರಣ ಮಾಡಲಾಗಿದೆ,” ಎಂದು ಸ್ಥಳೀಯರು ತಿಳಿಸಿದರು.
ಇದೇ ವೇಳೆ, ಘಟನೆಗೆ ಸಂಬಂಧಿಸಿದಂತೆ ಬಂಧನದಲ್ಲಿರುವ ಆರೋಪಿ ಮಹಿಳೆಯ ಮಾನಸಿಕ ಸ್ಥಿತಿ ಅಸ್ಥಿರವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.