ಚಿಕ್ಕಮಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಮಾಜಿ ಸಚಿವ ಸಿ ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಇದರ ಬೆನ್ನಲೇ 2017 ರಲ್ಲಿ ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ದಾಖಲಾಗಿದ್ದ ದತ್ತಪೀಠ ಆವರಣದ ಗೋರಿ ಹಾನಿ ಪ್ರಕರಣದ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು, ಎಲ್ಲಾ 14 ಜನ ಆರೋಪಿಗಳಿಗೆ ಸಮನ್ಸ್ ನೀಡಲಾಗಿದೆ.ಆದರೆ ದಶಕಗಳ ಹಳೆಯ ಕೇಸ್‌ಗಳ ತನಿಖೆಗೆ ಮರುಜೀವ ಕೊಡುವ ಮೂಲಕ ಚುನಾವಣೆಯಂತಹ ನಿರ್ಣಾಯಕ ಸಂದರ್ಭದಲ್ಲಿ ಸರ್ಕಾರವೇ ವಿಪಕ್ಷಗಳಿಗೆ ಅಸ್ತ್ರ ಕೊಟ್ಟಂತಾಗಿದೆ ಎನ್ನುವ ವಿಷಯ ಕೈ ವರಿಷ್ಠರ ಸಭೆಯಲ್ಲಿ ಗಂಭೀರವಾಗಿ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
ಕಳೆದ ಡಿಸೆಂಬರ್ 6 ರಂದು ನ್ಯಾಯಾಲಯಕ್ಕೆ 2017 ರ ದತ್ತಜಯಂತಿ ವೇಳೆ ಗೋರಿ ಹಾನಿ ಮಾಡಿದ ಪ್ರಕರಣವನ್ನು ಆಧರಿಸಿ ದತ್ತಭಕ್ತರ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಕರಣದ ಎಲ್ಲಾ 14 ಜನ ಆರೋಪಿತರಿಗೆ ಕೋರ್ಟ್ ಸಮನ್ಸ್ ನೀಡಿದೆ. ಕಳೆದ 6 ವರ್ಷಗಳ ಹಿಂದೆ ದಾಖಲಾಗಿದ್ದ ಕೇಸ್‌ಗೆ ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಚಾರ್ಜ್ಶೀಟ್ ಸಲ್ಲಿಕೆಗೆ ಅನುಮತಿ ನೀಡಿತ್ತು.
ಇದೀಗ 14 ಜನರ ಮೇಲಿನ ಕೇಸ್‌ನ ಆರೋಪಿಗಳಾದ ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್, ಲೋಕೇಶ್, ಮಹೇಂದ್ರ, ಸಂದೀಪ್ ಮತ್ತು ರಾಮುಗೆ ಪೊಲೀಸರು ಸಮನ್ಸ್ ನೀಡಿದ್ದು, ಎಲ್ಲಾ ಆರೋಪಿಗಳಿಗೂ ಇದೇ ಜ. 8 ರಂದು ಕೋರ್ಟಿಗೆ ಹಾಜರಾಗುವಂತೆ ಸೂಚನೆ ಸಹಾ ನೀಡಲಾಗಿದೆ. ಆದರೆ, ಕೋರ್ಟ್ ಸಮನ್ಸ್ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಸ್ಪಷ್ಟನೆ ನೀಡಿದ್ದು, ಜಿಲ್ಲೆಯಲ್ಲಿ ಯಾವುದೇ ಹಳೇ ಪ್ರಕರಣಗಳ ರೀ ಒಪನ್ ಆಗಿಲ್ಲ, ಕೆಲ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ತಿಳಿಸಿದ್ದಾರೆ.


