ಚಿಕ್ಕಮಗಳೂರು : ಮಗಳಿಗೆ ರಕ್ಷಕನಾಗುವ ಬದಲು ತಂದೆಯೇ ಭಕ್ಷಕನಾದ ಘೋರ ಘಟನೆಯೊಂದು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಹೋಬಳಿಯ ಗ್ರಾಮವೊಂದರಲ್ಲಿ ನಡೆದಿದೆ. ಹಣದ ಹಪಾಹಪಿಗೆ ಬಿದ್ದ ತಂದೆ ಮತ್ತು ಅಜ್ಜಿ ಸೇರಿ, ತಾಯಿ ಇಲ್ಲದ ೧೬ ವರ್ಷದ ಬಾಲಕಿಯನ್ನು ವೇಶ್ಯಾವಾಟಿಕೆ ಅಡ್ಡೆಗೆ ನೂಕಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಬಾಲಕಿಯ ತಾಯಿ ಮೃತಪಟ್ಟಿದ್ದರಿಂದ ಆಕೆ ತಂದೆ ಗಿರೀಶ್ ಹಾಗೂ ಅಜ್ಜಿ ನಾಗರತ್ನ ಅವರ ಆಶ್ರಯದಲ್ಲಿ ಬೆಳೆಯುತ್ತಿದ್ದಳು.ಆದರೆ, ಈ ಪಾಪಿಗಳು ಹಣಕ್ಕಾಗಿ ಬಾಲಕಿಯನ್ನು ಭರತ್ಶೆಟ್ಟಿ ಎಂಬುವವನ ಜೊತೆ ಮಂಗಳೂರಿಗೆ ಕಳುಹಿಸಿದ್ದಾರೆ. ಮಂಗಳೂರಿನಲ್ಲಿ ಕಳೆದ ೬ ದಿನಗಳಲ್ಲಿ ೧೦ಕ್ಕೂ ಹೆಚ್ಚು ಕಾಮುಕರು ಬಾಲಕಿಯ ಮೇಲೆ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನೊಂದ ಬಾಲಕಿ ನೀಡಿರುವ ಮಾಹಿತಿ ಪ್ರಕಾರ, ಆಕೆ ಋತುಸ್ರಾವದ ಸಮಯದಲ್ಲಿದ್ದರೂ ಸಹ ಕಿಂಚಿತ್ತೂ ಕರುಣೆ ತೋರದ ಕಾಮುಕರು ಆಕೆಯ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿದ್ದಾರೆ. ಸತತ ಆರು ದಿನಗಳ ಕಾಲ ನರಕಯಾತನೆ ಅನುಭವಿಸಿದ ಬಾಲಕಿ ಹೇಗೋ ಅವರಿಂದ ತಪ್ಪಿಸಿಕೊಂಡು ವಾಪಸ್ ಊರಿಗೆ ಬಂದಿದ್ದಾಳೆ.
ಕಾಮುಕರ ಗುಂಪಿನಿಂದ ತಪ್ಪಿಸಿಕೊಂಡು ಊರಿಗೆ ಬಂದ ನಂತರ ಬಾಲಕಿ ತನ್ನ ಚಿಕ್ಕಪ್ಪ ಮತ್ತು ಅತ್ತೆಯ ಬಳಿ, ತನಗೆ ತಂದೆ ಮತ್ತು ಅಜ್ಜಿಯಿಂದ ಆದ ಅನ್ಯಾಯ ಹಾಗೂ ಮಂಗಳೂರಿನಲ್ಲಿ ನಡೆದ ಭೀಕರ ಘಟನೆಯನ್ನು ವಿವರಿಸಿದ್ದಾಳೆ. ಕೂಡಲೇ ಎಚ್ಚೆತ್ತ ಬಾಲಕಿಯ ಚಿಕ್ಕಪ್ಪ ಬೀರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬೀರೂರು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ತಂದೆ ಗಿರೀಶ್, ಅಜ್ಜಿ ನಾಗರತ್ನ ಮತ್ತು ದಲ್ಲಾಳಿ ಭರತ್ಶೆಟ್ಟಿ ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು ೧೨ ಮಂದಿ ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ


