ಚಿಕ್ಕಮಗಳೂರು : ಕಾಡುಪ್ರಾಣಿಗಳು ಹಾಗೂ ಮಾನವನ ನಡುವಿನ ಸಂಘರ್ಷ ದಿನದಿಂದ ಹೆಚ್ಚುತ್ತಿದ್ದು ರೋಷಾವೇಷದ ದಾಳಿ ನಡೆಸಿದ ಆನೆಯು ತನ್ನ ಒಂದು ದಂತವನ್ನೇ ಕಳೆದುಕೊಂಡಿರುವ ಘಟನೆ ಚಿಕ್ಕಮಗಳೂರು ತರೀಕೆರೆ ತಾಲ್ಲೂಕು ತಣಿಗೆಬೈಲ್ನ ವರ್ತೆಗುಂಡಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ತರೀಕೆರೆ ತಾಲೂಕಿನ ವರ್ತೆಗುಂಡಿ ಗ್ರಾಮ ವರ್ತೆಗುಂಡಿ ಬಳಿ ಟಿಂಬರ್ ಕಾರ್ಮಿಕ ಅಕ್ಬರ್(35)ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.ತೋಟದಲ್ಲಿ ಆನೆ ಓಡಿಸುವಾಗ ಏಕಾಏಕಿ ನುಗ್ಗಿ ಬಂದಿದೆ. ನೆಲಕ್ಕೆ ಬಿದ್ದ ಅಕ್ಬರ್ ಮೇಲೆ ಕಾಲಿಟ್ಟು ಕಾಡಾನೆ ಕೊಂದಿದೆ. ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟ ವಿಚಾರ ಗೊತ್ತಾಗಿ ಸೋಮವಾರ ಮಧ್ಯಾಹ್ನ ಜನರು ತೋಟದ ಸುತ್ತಲೂ ನಿಂತು ಅದನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಸಿದ್ದರು.ಅಲ್ಲಿದ್ದವರು ಓಡಿ ತಪ್ಪಿಸಿಕೊಂಡಿದ್ದಾರೆ. ಆದರೆ ಅಕ್ಬರ್ ನೆಲಕ್ಕೆ ಬಿದ್ದ ಕೂಡಲೇ ಆತನನ್ನು ಆನೆ ಕಾಲಿನಿಂದ ಒಸಕಿ, ಕೋರೆಯಿಂದ ತಿವಿದಿದೆ.
ಮೃತ ಅಕ್ಬರ್ ಟಿಂಬರ್ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಆನೆಯ ಆರ್ಭಟ ಹೇಗಿತ್ತೆಂದರೆ,ತಿವಿತದ ರಭಸಕ್ಕೆ ಕೊಂಬು ತುಂಡಾಗಿ ನೆಲದಲ್ಲಿ ಹೂತುಕೊಂಡಿದ್ದು,ದೇಹದಿಂದ ಬೇರ್ಪಟ್ಟಿದೆ. ಕಾರ್ಮಿಕನ ದೇಹ ಛಿದ್ರ-ಛಿದ್ರವಾದ್ದು, ಕರುಳು ಹೊರಕ್ಕೆ ಬಂದಿದೆ. ಶವದ ಪಕ್ಕದಲ್ಲೇ ದಂತವೂ ಬಿದ್ದಿದೆ. ಘಟನೆಯಿಂದ ಸ್ಥಳೀಯರು ಆಕ್ರೋಶಗೊಂಡಿದ್ದು, ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.ಕಳೆದ ಎಂಟು ತಿಂಗಳಲ್ಲಿ ಜಿಲ್ಲೆಯಲ್ಲಿ ನಾಲ್ವರನ್ನ ಬಲಿ ಪಡೆದಿರುವ ಕಾಡಾನೆಗಳಿಂದ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಶವಾಗಾರದ ಮುಂದೆ ರೈತರು ಪ್ರತಿಭಟನೆ ಮಾಡಿದ್ದರು.