ಗೋಕಾಕ್ : ವರ್ಷವಿಡಿ ಹಾಲು ಕೊಟ್ಟು ಪೊರೆಯುವ ಎಮ್ಮೆಗಳಿಗೆ ಸಿಂಗಾರ ಮಾಡಿ.ನೈವೇದ್ಯ ತೋರಿಸಿ ಪೂಜಿಸಿ ದೀಪಾವಳಿ ನಿಮಿತ್ಯ ಗೋಕಾಕದ ವೀರಶೈವ ಗೌಳಿ ಸಮಾಜದ ವತಿಯಿಂದ ಎಮ್ಮೆಗಳ ಓಟ ಏರ್ಪಡಿಸಲಾಗಿತ್ತು, ಪ್ರತಿವರ್ಷದಂತೆ ಈ ವರ್ಷ ಗೋಕಾಕದಲ್ಲಿ ನಡೆಯುವ ಎಮ್ಮೆಗಳ ಓಟದ ಸ್ಪರ್ಧೆ ಕಣ್ಮನ ಸೆಳೆಯಿತು. ಹೊಸಪೇಟೆ ಗಲ್ಲಿಯಲ್ಲಿ ನಡೆಯುವ ಸ್ಪರ್ಧೆಯಂತೂ ರೋಚಕ.ಪ್ರತಿ ಕುಟುಂಬದವರು ಒಬ್ಬರಾದಂತೆ ಒಬ್ಬರು ಶೃಂಗಾರಗೊಂಡ ತಮ್ಮ ಎಮ್ಮೆಗಳನ್ನು ಸ್ಪರ್ಧೆಯಲ್ಲಿ ಓಡಿಸಿದರು.
ಕೆಲ ಯುವಕರು ಬೈಕಿನ ಸೈಲೆನ್ಸರ್ ತೆಗೆದು ಕರ್ಕಶ ಶಬ್ದ ಮಾಡುತ್ತ ಕೈಯಲ್ಲಿ ಕಪ್ಪು ಕಂಬಳಿ ಹಿಡಿದು ವೇಗವಾಗಿ ಬೈಕ್ ಓಡಿಸಿದರೆ ಎಮ್ಮೆಗಳು ಅವರನ್ನೇ ಹಿಂಬಾಲಿಸುತ್ತ ಓಡುವ ದೃಶ್ಯ ಎಂಥವರಲ್ಲೂ ರೋಮಾಂಚನ ಮೂಡಿಸುತಿತ್ತು.
ಎಮ್ಮೆಗಳ ಓಟದ ಸ್ಪರ್ಧೆ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಕೂಗು,ಸಿಳ್ಳೆ, ಚಪ್ಪಾಳೆಗಳ ಸುರಿಮಳೆಗೈಯುವ ಮೂಲಕ ಎಮ್ಮೆಗಳನ್ನು ಪ್ರೇಕ್ಷಕರು ಹುರಿದುಂಬಿಸಿದರು.
ಇನ್ನು ಸ್ಥಳೀಯ ಗೌಳಿ ಸಮಾಜದ ಯುವಕ ಸತೀಶ್ ಗೌಳಿ ಮಾತನಾಡಿ ಎಮ್ಮೆಗಳು ನಮಗೆ ವರ್ಷವಿಡೀ ಅನ್ನ ಹಾಕುತ್ತವೆ.ಪ್ರತಿವರ್ಷ ದೀಪಾವಳಿಯಲ್ಲಿ ಅವುಗಳನ್ನು ಅಲಂಕರಿಸಿ ಕುಟುಂಬಸ್ಥರೆಲ್ಲ ಪೂಜಿಸುತ್ತೇವೆ. ವಿವಿಧ ಬಡಾವಣೆಗಳಲ್ಲಿ ಓಡಿಸಿ ಸಂತಸಪಡುತ್ತೇವೆ. ಹಲವು ವರ್ಷಗಳಿಂದ ಈ ಆಚರಣೆ ಮುಂದುವರಿಸಿಕೊಂಡು ಬಂದಿದ್ದೇವೆ’ ಎಂದು ತಿಳಿಸಿದರು.ಈ ಸಂದರ್ಬದಲ್ಲಿ ನಗರಸಭೆ ಸದಸ್ಯ ಬಾಬು ಮುಳಗುಂದ,ಪವನ್ ಗೌಳಿ, ಕೃಷ್ಣ ಗೌಳಿ,ಸಾಗರ್ ಗೌಳಿ, ಮಂಜುನಾಥ್ ಗೌಳಿ, ಸಿದ್ದಪ್ಪ ಗೌಳಿ, ಉಮೇಶ್ ಗೌಳಿ, ಸೇರಿದಂತೆ ಇನ್ನುಳಿದವರು ಈ ಸ್ಪರ್ದೆಯಲ್ಲಿ ಭಾಗಿಯಾಗಿದ್ದರು.