ಗಂಗಾವತಿ : ಕರಡಿಗಳು, ರಸ್ತೆ ಬದಿಯ ಒಂದು ಹೊಲದಿಂದ ಮತ್ತೊಂದು ಹೊಲದತ್ತ ಹಿಂಡಾಗಿ ಹೋಗಿ ರಸ್ತೆ ದಾಟಿ ಸಮೀಪದ ಬೆಟ್ಟದ ಕಡೆಗೆ ಓಡಿ ಹೋಗಿರುವ ಘಟನೆ ಕನಕಗಿರಿ ತಾಲ್ಲೂಕಿನಲ್ಲಿ ನಡೆದಿದ್ದು, ಇದರಿಂದ ವಾಯು ವಿಹಾರಕ್ಕೆಂದು ಹೋಗಿದ್ದ ಜನ ಬೆಚ್ಚಿಬಿದ್ದಿರುವ ಘಟನೆ ನಡೆದಿದೆ.
ಕನಕಗಿರಿ ತಾಲ್ಲೂಕಿನ ಸೋಮಸಾಗರ ಹಾಗೂ ಕನ್ನೇರಮಡು ಗ್ರಾಮದ ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಒಂದಲ್ಲ ಎರಡಲ್ಲ ಮೂರು ನಾಲ್ಕು ಕರಡಿಗಳು ಹಾಡುಹಗಲೆ ಸಂಚರಿಸುವ ಮೂಲಕ ಆತಂಕ ಸೃಷ್ಟಿಸಿವೆ.
ಜನವಸತಿ ಪ್ರದೇಶಕ್ಕೆ ಅತ್ಯಂತ ಸನೀಹದಲ್ಲಿಯೇ ಕರಡಿಗಳು ಹಿಂಡಾಗಿ ರಸ್ತೆ ದಾಟುತ್ತಿರುವ ಈ ಘಟನೆ ನಡೆದಿದ್ದು, ಸಮೀಪದ ಹೊಲ-ಗದ್ದೆಗಳಲ್ಲಿ ಕೆಲಸಕ್ಕೆ ಹೋಗುವ ಕೃಷಿ ಕಾಮರ್ಿಕರು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಜನರಲ್ಲಿ ಈ ಘಟನೆ ಆತಂಕ ಉಂಟು ಮಾಡಿದೆ. ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಯುವಕನೊಬ್ಬ ಧೈರ್ಯ ಮಾಡಿ ಕರಡಿಗಳು ರಸ್ತೆ ದಾಟುತ್ತಿರುವ ದೃಶ್ಯವನ್ನು ದೂರದಿಂದಲೇ ಚಿತ್ರೀಕರಿಸಿಕೊಂಡಿದ್ದಾನೆ. ಕರಡಿಗಳು ರಸ್ತೆ ದಾಟಿಕೊಂಡು ಕಣ್ಮರೆಯಾಗುವ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ. ಕನಕಗಿರಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕಳೆದ ಹಲವು ದಿನಗಳಿಂದ ಕರಡಿಗಳ ಕಾಟ ವಿಪರೀತವಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೆ ಗಮನ ಹರಿಸಿ ಜನರಿಗೆ ಸೂಕ್ತ ರಕ್ಷಣೆ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.


