ಗಂಗಾವತಿ : ಪ್ರಧಾನಮಂತ್ರಿ ನರೇಂದ್ರಮೋದಿ ದೇಶದ ಚುಕ್ಕಾಣಿ ಹಿಡಿದ ಬಳಿಕ ದೇಶದ ಆಂತರಿಕ, ಆರ್ಥಿಕ , ರಕ್ಷಣಾತ್ಮಕವಾಗಿ ಬಲಾಢ್ಯವಾಗಿರುವುದರಿಂದ 2024ರ ಲೋಕಸಭೆಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಮೋದಿ ಮಗದೊಮ್ಮೆ ಪ್ರಧಾನಿಯಾಗಬೇಕು ಎಂದು ಹರಕೆ ಹೊತ್ತ ಯುವಕನೊಬ್ಬ ಒಂದು ಸಾವಿರ ಕಿಲೋ ಮೀಟರ್ ಪಾದಯಾತ್ರೆ ಕೈಗೊಂಡಿದ್ದಾರೆ.
ನಗರದ ಖಾಸಗಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಶಿಷಿಯನ್ ಹಾಗೂ ಅದರ ಮಾಲಿಕ ಪ್ರದೀಪ್ ದೇವರಶೆಟ್ಟಿ ಎನ್ನುವ ಯುವಕ ಈ ಸಾಹಸಕ್ಕೆ ಕೈಹಾಕಿದ್ದಾರೆ. ಗಂಗಾವತಿಯಿಂದ ಕೇರಳ ರಾಜ್ಯದ ಶಬರಿಮಲೈವರೆಗೂ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಅಂದ ಹಾಗೆ ಈ ಯುವಕನೇನು ಬಿಜೆಪಿ ಕಾರ್ಯಕರ್ತನಲ್ಲ, ಅಭಿಮಾನಿಯೂ ಅಲ್ಲ. ಆದರೆ ದೇಶಕ್ಕಾಗಿ ಮೋದಿ ಸಲ್ಲಿಸುತ್ತಿರುವ ಅನುಪಮ ಸೇವೆ ಅನುಲಕ್ಷಿಸಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಬಯಕೆ ಇದೆ ಎಂದು ಹೇಳುತ್ತಿದ್ದಾರೆ.
ಗಂಗಾವತಿಯ ಹಿರೇಜಂತಕಲ್ನ ನಿವಾಸಿ ಈ ಯುವಕ ಗುರುವಾರ ಆರಂಭಿಸಿದ ಪಾದಯಾತ್ರೆಗೆ ನಗರದ ಚನ್ನಬಸವ ಸ್ವಾಮಿ ತಾತನ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಗಾಪುರದ ಗುರುಸ್ವಾಮಿ ತಾತಯ್ಯ ಬೀಳ್ಕೊಟ್ಟರು.
ಯುವಕ ಕೈಗೊಂಡಿರುವ ಪಾದಯಾತ್ರೆಯು, ರಾಜ್ಯದ ಚಿತ್ರದುರ್ಗ, ಬೆಂಗಳೂರು ಮೂಲಕ ಸಾಗಿ ತಮಿಳುನಾಡಿನ ದಿಂಡಿಗಲ್ ಸೇಲಂ ಬಳಸಿಕೊಂಡು ಕೊನೆಗೆ ಕೇರಳದ ಶಬರಿಮಲೈಗೆ ತಲುಪುತ್ತದೆ. ನಿತ್ಯ 30ರಿಂದ 35 ಕಿ.ಮೀ. ಯುವಕ ಪ್ರಯಾಣಿಸಲಿದ್ದಾರೆ ಎಂದು ಸಂಘಟಕ ಪಂಪಾಪತಿ ಹಾಗೂ ದೇವಾಂಗ ಗುರು ತಿಳಿಸಿದ್ದಾರೆ.