ಗಂಗಾವತಿ : ಗಣೇಶನ ನಿಮಜ್ಜನದ ಮೆರವಣಿಗೆಯ ಸಂದರ್ಭದಲ್ಲಿ ನೃತ್ಯ ಮಾಡುತ್ತಿದ್ದ ಯುವಕನೊಬ್ಬ ಹಠಾತ್ ಕುಸಿದು ಬಿದ್ದ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಕೊಪ್ಪಳ ರಸ್ತೆಯ ಪ್ರಶಾಂತ ನಗರದಲ್ಲಿ ಗಣೇಶ ವಿಗ್ರಹ ವಿಸರ್ಜನೆ ಆಚರಣೆ ವೇಳೆ ಡ್ಯಾನ್ಸ್ ಮಾಡುತ್ತಲೇ ಯುವಕ ಸುದೀಪ್ ರುದ್ರಪ್ಪ ಸಜ್ಜನ್(23) ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.
ಪ್ರಶಾಂತ ನಗರದ ಯುವಕ ಮಂಡಳಿ ಗಣೇಶನ ವಿಸರ್ಜನೆ ಸಂಭ್ರಮ ಆಚರಿಸಲು ಮಹಾರಾಷ್ಟ್ರದ ಪುಣೆಯಿಂದ ಕರೆಸಿದ್ದ ಜಾಗರು ಅಂಬಿಕಾ ಡಿಜೆ ಸೌಂಡ್ ಸಿಸ್ಟಮ್ ತರಿಸಲಾಗಿತ್ತು.ಡಿಜೆ ಸೌಂಡ್ ನ ಸಂಗೀತಕ್ಕೆ ತಕ್ಮತೆ ಯುವ ಸಮೂಹ ಕುಣಿದು ಕುಪ್ಪಳಿಸುತಿತ್ತು.
ಇದೇ ಸಂದರ್ಭದಲ್ಲಿ ಯುವಕ ಸುದೀಪ್ ಸಜ್ಜನ್ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಕುಣಿಯುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಯುವಕ ಸ್ಥಳದಲ್ಲೇ ಸಾವನಾಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಈ ಘಟನೆ ನಂತರ ಪ್ರಶಾಂತ ನಗರ ಮತ್ತು ಲಿಂಗರಾಜ್ ಕ್ಯಾಂಪ್ ನ ಯುವಕರು ಆಯೋಜಿಸಿದ್ದ ಗಣೇಶ ಮೆರವಣಿಗೆ ಸ್ವಯಂ ಪ್ರೇರಿತರಾಗಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ನಗರದಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯಬಾರದೇಂದು ಸ್ವತಃ ಕೊಪ್ಪಳ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಸೇರಿ ನೂರಾರು ಪೋಲಿಸ್ ಸಿಬ್ಬಂದಿ ಸ್ಥಳದಲ್ಲೆ ಮೊಕ್ಕಂ ಹೂಡಿದ್ದರು. ಘಟನೆ ಸಮಯದಲ್ಲಿ ಸ್ಥಳದಲ್ಲೇ ಇದ್ದ ಎಸ್ಪಿ ಯಶೋಧಾ, ಯುವಕನ ಮೃತ ದೇಹವನ್ನು ನಗರದ ಉಪವಿಭಾಗ ಆಸ್ಪತ್ರೆಗೆ ರವಾನಿಸಿ ನಗರ ಪೋಲಿಸ್ ಠಾಣೆ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.