ಕೋಲಾರ : ಮದುವೆ ಅನ್ನೋದು ಏಳೇಳು ಜನುಮದ ಬಂಧನ ಅಂತ ನಮ್ಮ ಹಿರಿಯರ ಮಾತು ಆದರೆ ಇಲ್ಲಿ ಮದುವೆ ಆದ ಕೆಲವೇ ಕ್ಷಣದಲ್ಲಿ ನವದಂಪತಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದು ಗಾಯಗೊಂಡಿದ್ದ ವಧು ಚಿಕಿತ್ಸೆ ಫಲಕಾರಿಯಾಗದೇ ವಧು ಮೃತಪಟ್ಟ ಘಟನೆ ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ಗ್ರಾಮದಲ್ಲಿ ಇಂದು ನಡೆದಿದೆ.
ಅದ್ಧೂರಿಯಾಗಿ ಲಿಖಿತಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಆದರೆ ಅದೇನಾಯಿತೋ ಗೊತ್ತಿಲ್ಲ, ಕೆಲಗಂಟೆಗಳ ನಂತರ ರೂಮ್‌ಗೆ ಹೋಗಿದ್ದ ನವದಂಪತಿ ಅಲ್ಲೇ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರನ್ನು ಕೆಜಿಎಫ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ವಧು ಕೊನೆಯುಸಿರೆಳೆದಿದ್ದಾಳೆ.
ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕು ಚಂಬರಸನಹಳ್ಳಿ ಗ್ರಾಮದ ನವೀನ್ ಕೆಲವು ವರ್ಷಗಳಿಂದ ಆಂಧ್ರಪ್ರದೇಶದ ಬೈನಪಲ್ಲಿ ಗ್ರಾಮದ ಲಿಖಿತಶ್ರೀಯನ್ನು ಪ್ರೀತಿಸುತ್ತಿದ್ದ. ಇಬ್ಬರೂ ಸೇರಿ ಕಷ್ಟಪಟ್ಟು ಮನೆಯವರನ್ನು ಒಪ್ಪಿಸಿ ಗ್ರಾಮದಲ್ಲಿ ಸರಳವಾಗಿ ಮದುವೆಯನ್ನೂ ಮಾಡಿಕೊಂಡಿದ್ದಾರೆ. ಬೆಳಗ್ಗೆ ಮದುವೆಯಾದ ಜೋಡಿ ಎಲ್ಲ ಮದುವೆ ಶಾಸ್ತ್ರಗಳು ಮುಕ್ತಾಯಗೊಂಡ ನಂತರ ಒಂದು ಕೋಣೆಯಲ್ಲಿ ಹೋಗಿದ್ದಾರೆ. ಕೆಲ ಹೊತ್ತಿನ ನಂತರ ಕೊಠಡಿಯಲ್ಲಿದ್ದ ಹುಡುಗ ಹುಡುಗಿ ಹೊಡೆದಾಡಿಕೊಂಡಿದ್ದಾರೆ.ವರ ನವೀನ್ ಸ್ಥಿತಿ ಕೂಡ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸಪ್ತಪದಿ ತುಳಿದು ಇನ್ನೇನು ಸುಖವಾಗಿ ಸಂಸಾರ ಸಾಗಿಸಬೇಕಿದ್ದ ವಧು ದುರಂತ ಅಂತ್ಯಕಂಡಿದ್ದರೆ, ವರ ನವೀನ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ. ಆದ್ರೆ, ಯಾವ ಕಾರಣಕ್ಕೆ ಜೀವ ಹೋಗುವಾಗೆ ಹೊಡೆದುಕೊಂಡರು ಎನ್ನುವುದು ತಿಳಿದುಬಂದಿಲ್ಲ. ಸದ್ಯ ವಿಷಯ ತಿಳಿದು ಸ್ಥಳಕ್ಕೆ ಅಂಡರ್ ಸನ್ ಪೇಟೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.


