ಕೊಪ್ಪಳ : 2014 ರಲ್ಲಿ ಮರಕುಂಬಿ ಗ್ರಾಮದಲ್ಲಿ ಜಾತಿ ಸಂಘರ್ಷವಾಗಿತ್ತು. ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ದಲಿತರಿಗೆ ಕ್ಷೌರದಂಗಡಿ ಹೋಟೆಲಿನಲ್ಲಿ ಪ್ರವೇಶವಿರಲಿಲ್ಲ ಇದನ್ನು ದಲಿತರು ಪ್ರಶ್ನಿಸಿದಾಗ 2014 ರಲ್ಲಿ ಸವರ್ಣಿಯರು – ದಲಿತರ ನಡುವೆ ಜಗಳವಾಗಿತ್ತು ದ್ವೇಷ ಬೆಳೆದಿತ್ತು.ಈ ಹಿನ್ನೆಲೆ ಗ್ರಾಮದ ಮಂಜುನಾಥ ಎಂಬ ಸವರ್ಣೀಯ ಸಮುದಾಯದ ವ್ಯಕ್ತಿ ಗಂಗಾವತಿಗೆ ಹೋಗಿದ್ದಾಗ ಹಲ್ಲೆಯಾಗಿತ್ತು ಈ ಬಗ್ಗೆ ಗ್ರಾಮದ ದಲಿತರೇ ಹಲ್ಲೆ ಮಾಡಿದ್ದಾರೆಂದು ಸವರ್ಣೀಯರು ದಲಿತರ ಮೇಲೆ ದೌರ್ಜನ್ಯ ,ಧಾಂದಲೆ ನಡೆಸಿದ್ದರು.ಆ ಸಂದರ್ಭದಲ್ಲಿ ದಲಿತರ ಗುಡಿಸಲಿಗೆ ಬೆಂಕಿ ಹಚ್ಚಿದ್ದು ಗುಡಿಸಲಿನಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿಯಾಗಿರಲಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ತೀರ್ಪು ಕೊಪ್ಪಳದಲ್ಲಿ ಹೊರಬಿದ್ದಿದೆ. ದಲಿತರನ್ನ ನಿಂದಿಸಿದ್ದ ಪ್ರಕರಣದಲ್ಲಿ ಮೊದಲ ಮಹತ್ವದ ತೀರ್ಪನ್ನ ನ್ಯಾಯಾಲಯ ನೀಡಿದೆ. ದಲಿತರ ಮೇಲೆ ಹಲ್ಲೆ, ದೌರ್ಜನ್ಯ ಕೇಸ್‌ನಲ್ಲಿ ಅತಿದೊಡ್ಡ ಜಯ ಸಿಕ್ಕಿದೆ. ದೇಶವೇ ತಿರುಗಿ ನೋಡುವಂತ ತೀರ್ಪನ್ನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದೆ.
ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಹತ್ತು ವರ್ಷದ ಹಿಂದೆ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣದಲ್ಲಿ 101 ಜನರ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. ತಲಾ 5 ಸಾವಿರ ರೂಪಾಯಿ ದಂಡವನ್ನ ಕೊಪ್ಪಳದ ಸತ್ರ ನ್ಯಾಯಾಲಯ ವಿಧಿಸಿ ಆದೇಶ ಹೊರಡಿಸಿದೆ. ಉಳಿದ ಮೂವರಿಗೆ ಕಠಿಣ ಶಿಕ್ಷೆ, ತಲಾ 2 ಸಾವಿರ ದಂಡ ವಿಧಿಸಿದೆ. 117 ಮಂದಿಯ ಪೈಕಿ 16 ಆರೋಪಿಗಳು ಮೃತಪಟ್ಟಿದ್ದಾರೆ. 101 ಆರೋಪಿಗಳ ವಿರುದ್ಧ ಇರುವ ದಾಖಲೆ ಪರಿಶೀಲನೆ ಮಾಡಲಾಗಿದ್ದು. ಅಕ್ಟೋಬರ್ 21ರಂದು ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿದೆ. ನ್ಯಾಯಧೀಶರಾದ ಚಂದ್ರಶೇಖರ್‌ರಿಂದ ಮಹತ್ವದ ತೀರ್ಪು ನೀಡಿದ್ದಾರೆ. ತಡರಾತ್ರಿ ಬಿಗಿ ಬಂದೋಬಸ್ತ್ನಲ್ಲಿ ಎಲ್ಲಾ ಅಪರಾಧಿಗಳನ್ನ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.ಅಸ್ಪ್ರಶ್ಯತೆ ಪ್ರಕರಣವೊಂದರಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರಿಗೆ ಶಿಕ್ಷೆ ಯಾಗಿರುವುದು ದೇಶದಲ್ಲಿ ಇದು ಮೊದಲ ಬಾರಿಯೆಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ.