ಕುಷ್ಟಗಿ: ರಾಜ್ಯ ಕಾಂಗ್ರೆಸ್ ಸರಕಾರ ದ ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಅಂತಹದ್ದರಲ್ಲಿ ಇಲ್ಲೊಬ್ಬ ಮಹಿಳೆ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯ ಫಲ ಬೇಡ ಎನ್ನುತ್ತಿದ್ದಾರೆ. ಬದುಕು ನಡೆಸಲು ಎಷ್ಟು ಬೇಕೋ ಅಷ್ಟು ಇದ್ದು ಹೆಚ್ಚಿನದ್ದು ನನಗ್ಯಾಕೆ ಎಂದು ಆ ಶಿವಶರಣೆ ಗೃಹಲಕ್ಷ್ಮೀ ಯನ್ನು ನಯವಾಗಿ ತಿರಸ್ಕರಿಸಿದ್ದಾರೆ.
ನಿಡಶೇಸಿ ಗ್ರಾಮದ 78ರ ಇಳಿವಯಸ್ಸಿನ ಅಜ್ಜಿ ಶಿವ ಶರಣೆಯಾಗಿ ಸತ್ಯಂತ ಸರಳ ಜೀವನ ನಡೆಸುತ್ತಿರುವ ಶಿವಮ್ಮ ಸಜ್ಜನ ಸಮಾಜಕ್ಕೆ ಮಾದರಿಯಾಗಿದ್ದಾರೆ. 50 ವರ್ಷಗಳ ಹಿಂದೆ ಸರ್ಕಾರಿ ನೌಕರ ಆಗಿದ್ದ ಪತಿಯಿಂದ ದೂರವೇ ಉಳಿದು ಗೆಜ್ಜೆಬಾವಿ ಮಠದಲ್ಲಿ ಸೇವೆ ಸಲ್ಲಿಸಿ ನಂತರ, ನಿಡಶೇಸಿ ಗ್ರಾಮದಲ್ಲಿ ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ. ಒಬ್ಬಂಟಿ ಜೀವನ ನಡೆಸುತ್ತಿರುವ ಶಿವವ್ವ ಅಜ್ಜಿಗೆ ಶಿವಶರಣರ ವಚನಗಳೇ ಜೀವನ ಸಂಗಾತಿಯಾಗಿದ್ದಾರೆ.
ಬಸವಾದಿ ಶರಣರ ಪುರಾಣ ಪ್ರವಚನ ಎಲ್ಲಿಯೇ ಜರುಗಲಿ ತಪ್ಪದೇ ಹಾಜರಾಗುವ ಸರಳ ಸ್ವಭಾವ ಹಿರಿಯ ಜೀವಿ. ಯಾರಿಂದಲೂ ಸಹಾಯ ನಿರೀಕ್ಷಿಸಿಸದ ಈ ಅಜ್ಜಿ ಸ್ಥಳೀಯ ಗ್ರಾಮ ಪಂಚಾಯತಿಯಿಂದ ಶೌಚಾಲಯ ನಿರೀಕ್ಷಿಸಿದ್ದು, ಆದರೆ ಇಲ್ಲಿಯವರೆಗೂ ಸಾದ್ಯವಾಗಿಲ್ಲ. ಹೀಗಾಗಿ ಮತ್ತೆ ಕೇಳುವುದನ್ನೇ ಬಿಟ್ಟಿದ್ದಾರೆ. ಅವರ ಜಮೀನು ಕೆರೆ ಮುಳುಗಡೆಯ ಪರಿಹಾರವನ್ನು ಬ್ಯಾಂಕಿನಲ್ಲಿ ಠೇವಣಿಯಲ್ಲಿರಿಸಿದ್ದಾರೆ. ಅದರ ಬಡ್ಡಿಯ ಹಣ ಹಾಗೂ ರೇಷನ್ ಕಾರ್ಡನಿಂದ ಅಕ್ಕಿ ನಮ್ಮ ಜೀವನಕ್ಕೆ ಇಷ್ಟು ಸಾಕು ಹೆಚ್ಚಿನದು ಗೃಹಲಕ್ಷ್ಮೀ ಯ 2ಸಾವಿರ ರೂ. ಹಣ ಒಲ್ಲೆ ಎಂದಿರುವುದು ಗಮನಾರ್ಹ ಎನಿಸಿದೆ.