ಕುಂಬಳೆ : ಮಗನ ಸಾವಿನಿಂದ ತೀವ್ರ ನೊಂದ ತಂದೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂಬಳೆ ಸಮೀಪದ ಬಂಬ್ರಾಣ ಕಲ್ಕುಳದಲ್ಲಿ ನಡೆದಿದೆ. ಲೋಕೇಶ್ (52) ಮೃತ ವ್ಯಕ್ತಿ. ಅವರ ಶವ ಆಗಸ್ಟ್ 15 ರಂದು ಮಂಗಳವಾರ ಬೆಳಿಗ್ಗೆ ಉಳ್ಳಾಲ ಕಡಲತೀರದಲ್ಲಿ ಪತ್ತೆಯಾಗಿದೆ. ಜುಲೈ 10 ರಂದು ನಾಪತ್ತೆಯಾಗಿದ್ದ ಲೋಕೇಶ್ ಅವರ 26 ವರ್ಷದ ಮಗ ರಾಜೇಶ್ ಜುಲೈ 12 ರಂದು ಬೆಂಗ್ರೆ ಬಳಿಯ ನೇತ್ರಾವತಿ ದಡದಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಗನ ಸಾವಿನಿಂದ ಲೋಕೇಶ್ ತೀವ್ರ ನೊಂದಿದ್ದರು. ಮಂಗಳವಾರ ಬೆಳಗ್ಗೆ ಹಲವು ಮಂದಿಗೆ ವಾಟ್ಸ್ಆ್ಯಪ್ ಸಂದೇಶ ರವಾನಿಸಿ ತಮ್ಮ ಜೀವನವನ್ನು ಅಂತ್ಯಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದರು. ಮೊಬೈಲ್ ಫೋನ್ ಅನ್ನು ಮನೆಯಲ್ಲಿಟ್ಟು ಹೋಗಿದ್ದರು. ಸ್ನೇಹಿತರು ಅವರ ಫೋನ್ಗೆ ಕರೆ ಮಾಡಿದಾಗ ಅವರ ನಿರ್ಧಾರದ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ತಿಳಿದಿದೆ. ಕೂಡಲೇ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆದರೆ ಸ್ಥಳೀಯ ಮೀನುಗಾರರಿಗೆ ಸ್ವಲ್ಪದರಲ್ಲೇ ಉಳ್ಳಾಲದಲ್ಲಿ ಲೋಕೇಶ್ ಮೃತದೇಹ ಪತ್ತೆಯಾಗಿದೆ.


