ಕಾಸರಗೋಡು : ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕೇರಳದಲ್ಲಿ ಸಂಘ ಪರಿವಾರದ 950 ಮಂದಿಯ ಹತ್ಯೆಗೆ ಹಿಟ್‌ಸ್ಟ್ ತಯಾರಿಸಿರುವ ಆತಂಕಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಹಿಟ್‌ಲಿಸ್ಟ್‌ನಲ್ಲಿ ರಾಜ್ಯದ 14 ಜಿಲ್ಲೆಗಳಲ್ಲಿರುವವರ ವಿವರ ಅಲ್ಲದೇ ನ್ಯಾಯಾಧೀಶರೊಬ್ಬರ ಹೆಸರು ಇದೆ. ಎನ್‌ಐಎ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಜಾಮೀನು ನೀಡುವ ಪ್ರಕ್ರಿಯೆ ಸಂದರ್ಭ ಈ ಹಿಟ್ ಲಿಸ್ಟ್‌ನ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ನೀಡಿದ್ದಾರೆ. ಎನ್‌ಐಎ ಬಂಧಿಸಿದ್ದ ಕೇರಳದ ಸಿರಾಜುದ್ದೀನ್ ಎಂಬಾತ 240 ಮಂದಿಯ ಹಿಟ್‌ಲಿಸ್ಟ್ ತಯಾರಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಉಳಿದಂತೆ ತಲೆಮರೆಸಿಕೊಂಡಿರುವ ಅಬ್ದುಲ್ ವಹದ್ ನಿಂದ 5, ಇನ್ನೋರ್ವನಿಂದ 232, ಅಯೂಬ್ ಎಂಬಾತನಿಂದ 500 ಮಂದಿಯ ಹೆಸರಿರುವ ಪಟ್ಟಿಯ ಬಗ್ಗೆ ಮಾಹಿತಿ ಲಭಿಸಿದೆ.
ಜಾಮೀನು ಅರ್ಜಿ ಸಲ್ಲಿಸಿದ್ದ ನಾಲ್ವರು ಆರೋಪಿಗಳು ತಾವು ನಿರಪರಾಧಿಗಳೆಂದು ವಾದಿಸಿದ್ದರು. ಆದರೆ ಎನ್‌ಐಎ ವರದಿ ಹಿನ್ನೆಲೆಯಲ್ಲಿ ಆರೋಪಿಗಳ ಜಾಮೀನು ಅರ್ಜಿ ವಾದವನ್ನು ಹೈಕೋರ್ಟ್ ತಡೆ ಹಿಡಿದಿದೆ.