ಉಡುಪಿ : ಕೆಲವು ವೈದ್ಯರು ಮತ್ತು ಪ್ರಾಧ್ಯಾಪಕರು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿ ಅನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದ ಮೇಲೆ ಐವರು ಸಂಘಪರಿವಾರದ ಕಾರ್ಯಕರ್ತರನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮತ್ತು ಸುಜಿತ್ ಸಪಲಿಗ ಬಂಧಿತರು. ಜುಲೈ 29 ರಂದು ಮಂಗಳೂರಿನ ಕಾಲೇಜೊಂದರ ನಾಲ್ವರು ವೈದ್ಯರು ಹಾಗೂ ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರಾಧ್ಯಾಪಕರು ಕಾರಿನಲ್ಲಿ ತೆರಳುತ್ತಿದ್ದಾಗ ಕಾರ್ಕಳದ ಕುಂಟಲ್ಪಾಡಿಯಲ್ಲಿ ಅವರ ವಾಹನವನ್ನು ಹಿಂಬಾಲಿಸಿದ ಆರೋಪಿಗಳು ಕಾರನ್ನು ಅಡ್ಡಗಟ್ಟಿ ಬೆದರಿಸಿ ನಿಂದಿಸಿದ್ದಾರೆ. ಕಾರಿನಲ್ಲಿದ್ದ ಪ್ರಾಧ್ಯಾಪಕರು ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕಾರ್ಕಳ ಡಿವೈಎಸ್ಪಿ ಅರವಿಂದ ಕಲ್ಲಗುಜ್ಜೆ, ಸರ್ಕಲ್ ಇನ್ಸ್‌ಪೆಕ್ಟರ್ ನಾಗರಾಜ್, ಎಎಸ್‌ಐ ಸಂದೀಪ್ ಶೆಟ್ಟಿ ಸೇರಿದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ


