ಕಲಬುರಗಿ : ಇತ್ತೀಚಿನ ದಿನಗಳಲ್ಲಿ ಸಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಅಪ್ಲೋಡ್ ಮಾಡುವುದು ಒಂದು ಶೋಕಿಯಾಗಿದೆ ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹಂಚಿಕೊಳ್ಳುವ ಮುನ್ನ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ, ಪೊಲೀಸ್ ಠಾಣೆಯಲ್ಲಿ ಲಾಠಿ ರುಚಿ ಅನುಭವಿಸುವ ಅವಕಾಶವೂ ಕೂಡ ತಂತಾನೆ ಒದಗಿ ಬರುತ್ತದೆ.
ಕಲಬುರಗಿಯಲ್ಲಿ ಇಬ್ಬರ ವಿರುದ್ಧ ಪಿಸ್ತೂಲ್ ಮಾದರಿಯ ಲೈಟರ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಟೋ ಹರಿಬಿಟ್ಟ ಯುವಕರ ಮೇಲೆ ಸೇಡಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಪಟ್ಟಣದ ಇಂದಿರಾ ನಗರದ ನಿವಾಸಿಗಳಾದ ಮಹೇಶ ತಂದೆ ಕಾಶಿನಾಥ ಹಾಗೂ ಬಸವರಾಜ ತಂದೆ ಜಗನ್ನಾಥ ಎಂಬುವ ಯುವಕರೇ ನಕಲಿ ಲೈಟರ್ ಮಾದರಿ ಪಿಸ್ತೂಲ್ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಪೋಟೋ ಹರಿಬಿಟ್ಟಿದ್ದಾರೆ. ಈ ಸಂಬಂಧ ಇಬ್ಬರು ಯುವಕರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿರುವ ಪೊಲೀಸರು ಅವರಿಂದ ನಕಲಿ ಲೈಟರ್ ಮಾದರಿ ಪಿಸ್ತೂಲ್ನ್ನು ವಶಕ್ಕೆ ಪಡೆದಿದ್ದಾರೆ.
ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಭಾವಚಿತ್ರಗಳನ್ನು ಹರಿಬಿಡುವ ಮೂಲಕ ಅಶಾಂತಿ ಸೃಷ್ಠಿಸದಂತೆ ಎಚ್ಚರಿಕೆ ನೀಡಿದ್ದಾರೆ. ಈ ರೀತಿ ನಕಲಿ ಪಿಸ್ತೂಲ್, ಮಾರಕಾಸ್ತ್ರಗಳನ್ನು ಹಿಡಿದ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಭಯ ಸೃಷ್ಟಿಸುವ ಕೆಲಸ ಮಾಡಬೇಡಿ. ಒಂದು ವೇಳೆ ಈ ಇದೇ ರೀತಿಯ ಘಟನೆಗಳು ಮರುಕಳಿಸಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಸ್ಪಿ ಅಕ್ಷಯ್ ಹಾಕೆ ಎಚ್ಚರಿಸಿದ್ದಾರೆ.