Friday, March 13, 2026
Flats for sale
Homeಜಿಲ್ಲೆಕಡಬ : ಸ್ಕೂಟರ್ ಸವಾರನ ಮೇಲೆ ಮರ ಬಿದ್ದು ದಾರುಣ ಸಾವು,ರಸ್ತೆ ತಡೆದು ಸ್ಥಳೀಯರಿಂದ ಪ್ರತಿಭಟನೆ..!

ಕಡಬ : ಸ್ಕೂಟರ್ ಸವಾರನ ಮೇಲೆ ಮರ ಬಿದ್ದು ದಾರುಣ ಸಾವು,ರಸ್ತೆ ತಡೆದು ಸ್ಥಳೀಯರಿಂದ ಪ್ರತಿಭಟನೆ..!

ಕಡಬ : ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಬೃಹತ್‌ ಮರ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಡಬ -ಪಂಜ ರಸ್ತೆಯ ಕೋಡಿಂಬಾಳ ಸಮೀಪ ಪುಳಿಕುಕ್ಕು ಎಂಬಲ್ಲಿ ಶನಿವಾರ ದಿನಾಂಕ 2 ರಂದು ನಡೆದಿದೆ. ಮೃತ ಸವಾರನನ್ನು ಎಡಮಂಗಲ ಗ್ರಾಮದ ಸೀತಾರಾಮ ಗೌಡ (58) ಎಂದು ಗುರುತಿಸಲಾಗಿದೆ. ದೀಪಾವಳಿ ಪ್ರಯುಕ್ತ ಹರಕೆ ಇದ್ದುದರಿಂದ ಕೋಳಿ ತರುವುದಕ್ಕಾಗಿ ಕಡಬಕ್ಕೆ ಹೋಗಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಸ್ಕೂಟಿ ಸವಾರನೊಬ್ಬ ದಾರುಣವಾಗಿ ಸಾವನ್ನಪ್ಪಿದ ಹಿನ್ನಲೆಯಲ್ಲಿ ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರಗಳನ್ನು ತೆರವು ಮಾಡಿ ಸಂತ್ರಸ್ತ ಕುಟುಂಬಕ್ಕೆ ಸರಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ನಿವಾಸಿಗಳು ಶನಿವಾರ ಕಡಬ-ಪಂಜ ರಸ್ತೆ ತಡೆ ನಡೆಸಿದ್ದಾರೆ .

ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿ ಸಾರ್ವಜನಿಕರು ರಸ್ತೆಗೆ ಬಿದ್ದ ಮರವನ್ನು ತೆಗೆಯದಂತೆ ತಡೆಹಿಡಿದಿದ್ದು ಘಟನೆಯಿಂದ ಕಡಬ-ಪಂಜ ಹೆದ್ದಾರಿಯಲ್ಲಿ ಎರಡೂವರೆ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾ ಪ್ರತಿಭಟನಾಕಾರರನ್ನು ಭೇಟಿ ಮಾಡಿ, ಒಂದು ವರ್ಷದೊಳಗೆ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಗುವುದು ಮತ್ತು ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಕಡಬ ಉಪನಿರೀಕ್ಷಕ ಅಭಿನಂದನ್ ಎಂ ಎಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತಿಭಟನೆಯ ನೇತೃತ್ವವನ್ನು ಸ್ಥಳೀಯ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ಫಝಲ್ ಕೋಡಿಂಬಾಳ, ರಘುರಾಮ ನಾಯ್ಕ್ ಕುಕ್ಕೆರೆಬೆಟ್ಟು, ಸೀತಾರಾಮ ಗೌಡ ಕೆ, ಅನೀಶ್ ಲೋಬೋ, ಬಾಲಕೃಷ್ಣ ಡಿ ಕೆ, ಜಯಂತ ಕೆ, ಕೇಶವ ಬೇರಿಕೆ, ರಾಮಣ್ಣ ಜಲತಾರು, ಮೋಹನ ಕೋಡಿಂಬಾಳ, ರಾಧಾಕೃಷ್ಣ ಕೊಲ್ಪೆ ವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular