ಮಂಗಳೂರು : ತೊಕ್ಕೊಟ್ಟು ಸಮೀಪದ ಕಲ್ಲಾಪು ನಾಗನ ಕಟ್ಟೆಯ ರಾ.ಹೆ.66ರ ಬಳಿ ನಡೆದ ಘಟನೆಯಲ್ಲಿ ಸಹೋದರನೊಂದಿಗೆ ಬೈಕ್‌ನಲ್ಲಿ ಹಿಂಬದಿ ಸವಾರಿ ಮಾಡುತ್ತಿದ್ದ ಮಹಿಳೆ ಸೀರೆ ಸಿಕ್ಕಿ ಬೈಕ್‌ನಿಂದ ಬಿದ್ದು ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ಮೃತರನ್ನು ಕಾಸರಗೋಡು ಜಿಲ್ಲೆಯ ಮಧೂರು ನಿವಾಸಿ ಸುಮಾ ನಾರಾಯಣ ಗಟ್ಟಿ (51) ಎಂದು ಗುರುತಿಸಲಾಗಿದೆ. ಘಟನೆ ಭಾನುವಾರ ನಡೆದಿದೆ. ಸೌಮ್ಯೇಶ್ವರ ಗ್ರಾಮದ ಪಿಲಾರು ಎಂಬಲ್ಲಿನ ತಮ್ಮ ಕುಟುಂಬದ ನಿವಾಸದಲ್ಲಿ ಸುಮಾ ವಾರ್ಷಿಕ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಜೆ ಸುಮಾ ಅವರು ತಮ್ಮ ಸಹೋದರನೊಂದಿಗೆ ತಮ್ಮ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಕಲ್ಲಾಪು ನಾಗನ ಕಟ್ಟೆ ಎಂಬಲ್ಲಿ ರಾ.ಹೆ.66 ರ ಸಮೀಪ ಸ್ಕೂಟರ್‌ನಿಂದ ಏಕಾಏಕಿ ಬಿದ್ದಿದ್ದಾರೆ. ಆಕೆಯ ಸೀರೆಯು ಸ್ಕೂಟರ್‌ನ ಚಕ್ರಕ್ಕೆ ಸಿಕ್ಕಿ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಮಾ ಗಟ್ಟಿ ಅವರು ಮಧೂರಿನ ಗಟ್ಟಿ ಸಮುದಾಯದ ಪ್ರಮುಖ ವ್ಯಕ್ತಿಯಾಗಿದ್ದು, ಗಟ್ಟಿ ಸಮಾಜ ಸಂಘಟನೆಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಅವರು ವಿವಿಧ ಸಾಮಾಜಿಕ ಮತ್ತು ಸಮುದಾಯ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು ಪತಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.


