ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ಗುಡ್ಡ ಕುಸಿತವಾಗಿದ್ದು, ಬರೋಬ್ಬರಿ 11 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಯಲ್ಲಿ ರಸ್ತೆಯ ಪಕ್ಕದಲ್ಲಿದ್ದ ಟೀ ಅಂಗಡಿಯ ಮೇಲೆ ಗುಡ್ಡ ಕುಸಿದಿದ್ದು, ಒಂದೇ ಕುಟುಂಬದ 5 ಜನರು ಸಾವನ್ನಪ್ಪಿದ್ದರು. ಜೊತೆಗೆ, ಅಲ್ಲಿ ಟೀ ಕುಡಿಯಲು ಬಂದಿದ್ದ ಇಬ್ಬರು ಸೇರಿ ಒಟ್ಟು 7 ಜನರ ಮೃತದೇಹಗಳನ್ನು ಗುಡ್ಡ ಕುಸಿತದ ಸ್ಥಳದಿಂದ ಹೊರಗೆ ತೆಗೆಯಲಾಗಿದೆ. ಆದರೆ, ಇನ್ನೂ 4 ಜನರ ಮೃತದೇಹ ಹುಡುಕಲು ಪೊಲೀಸರು, ಮಿಲಿಟರಿ ಪಡೆ ಹಾಗೂ ವಿಪತ್ತು ನಿರ್ವಹಣಾ ಪಡೆಗಳಿಂದ ಕಾರ್ಯಾಚರಣೆ ನಡೆಯುತ್ತಿದೆ.
ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ನಡೆದು ಇಂದಿಗೆ 10 ದಿನಗಳು ಕಳೆದಿದ್ದು, 8 ಜನರ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಮೂವರಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಜೊತೆಗೆ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಗಂಗಾವಳಿ ನದಿಯಲ್ಲಿ ಇರುವುದು ನಿನ್ನೆ(ಜು.24) ಖಚಿತವಾಗಿದ್ದು, ಬೂಮ್ ಫೋಕ್ಲೇನ್ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಆದರೆ, ಇದೀಗ ಘಟನೆಯಲ್ಲಿ ಮತ್ತೋರ್ವ ತಮಿಳುನಾಡು ಮೂಲದ ಲಾರಿ ಚಾಲಕ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿದೆ.
ಶಿರೂರು ಬಳಿ ಗುಡ್ಡ ಕುಸಿದ ಸಂದರ್ಭದಲ್ಲಿ ಆತನ ಟ್ಯಾಂಕರ್ ಗುಡ್ಡ ಕುಸಿತವಾದ ಪಕ್ಕದಲ್ಲೆ ಇತ್ತು. ಅದನ್ನು ಜಿಲ್ಲಾಡಳಿತದವರು ಬೇರೆ ಕಡೆ ಸ್ಥಳಾಂತರ ಮಾಡಿದ್ದರು. ಟ್ಯಾಂಕರ್ ಲಾರಿ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ‘ಚಾಲಕ ಶರವಣ ನಾಪತ್ತೆ ಆದ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಆಗಿರುವ ಶರವಣ ಅವರ ಮಾವ ಸೆಂದೀಲ್ ಎಂಬುವವರು ದೂರು ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಆತನ ಮೊಬೈಲ್ ಬ್ಯಾಟರಿ ಕಡಿಮೆ ಆಗಿ ಮೊಬೈಲ್ ಸ್ವಿಚ್ ಆಫ್ ಆಗಿರಬಹುದು. ಆದ್ರೆ, ಬಹಳ ದಿನ ಕಳೆದರೂ ಮೊಬೈಲ್ ಆನ್ ಆಗದಿದಕ್ಕೆ ಹುಡುಕಾಟ ನಡೆಸಿದ್ದೇವೆ ಎಂದರು. ಇದೀಗ ಲಾರಿ ಚಾಲಕರಿಂದ ಮಾಹಿತಿ ಸಿಗುತ್ತಿದ್ದಂತೆ ಶರವಣ ಸಂಬಂಧಿಕರು ಶಿರೂರುಗೆ ಬಂದಿದ್ದಾರೆ.ಒಟ್ಟಿನಲ್ಲಿ ಸ್ಥಳೀಯ ಪ್ರತ್ಯಕ್ಷ ದರ್ಶಿ ಹೇಳುವ ರೀತಿ ೧೫ ಜನ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.


