ಉಡುಪಿ : ಕಳೆದ ವಾರ ಮಂಗಳೂರಿನಲ್ಲಿ ವಿದ್ಯಾರ್ಥಿನಿಗೆ ಥಟ್ಟನೆ ಎದೆನೋವು ಕಾಣಿಸಿಕೊಂಡು ತೀವ್ರ ಅಸ್ವಸ್ಥ ಗೊಂಡ ಯುವತಿಯನ್ನು ಬಸ್ ಚಾಲಕ ಹಾಗೂ ನಿರ್ವಾಹಕ ಬಸ್ಸಿನಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಅಮೂಲ್ಯವಾದ ಜೀವವನ್ನು ಉಳಿಸಿ ಮೆಚ್ಚುಗೆಗೆ ಪಾತ್ರರಾದ ಬೆನ್ನಲ್ಲೇ ಮತ್ತೊಂದು ಘಟನೆ ಉಡುಪಿಯಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು ನವೀನ್ ಹೆಸರಿನ ಬಸ್ ಶಿರ್ವದಿಂದ ಉಡುಪಿಗೆ ತೆರಳುತ್ತಿತ್ತು. ನಗರದ ಹಳೇ ತಾಲೂಕು ಕಚೇರಿಗೆ ಬಸ್ ಬರುತ್ತಿದ್ದಂತೆ ಯುವತಿಯೊಬ್ಬಳು ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಕೂಡಲೆ ಚಾಲಕ ಶಶಿಕಾಂತ್ ಬಸ್ ಅನ್ನು ಟಿಎಂಎ ಪೈ ಆಸ್ಪತ್ರೆಗೆ ಕಡೆಗೆ ತಿರುಗಿಸಿದರು. ಬಸ್ ಅನ್ನು ನೇರವಾಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಬಳಿಕ ತೆಗೆದುಕೊಂಡು ಹೋಗಿ ಯುವತಿಯನ್ನು ದಾಖಲಿಸಿದರು. ತಕ್ಷಣ ಯುವತಿಗೆ ಪ್ರಥಮ ಚಿಕಿತ್ಸೆಗೆ ನೀಡಲಾಯಿತು. ಈ ವಿಚಾರವನ್ನು ಯುವತಿಯ ಮನೆಯವರಿಗೆ ತಿಳಿಸಲಾಯಿತು. ಪೋಷಕರು ಆಸ್ಪತ್ರೆಗೆ ಬರುವ ತನಕ ಯುವತಿಯ ಚಿಕಿತ್ಸೆಗೆ ಚಾಲಕ ಹಾಗೂ ನಿರ್ವಾಹಕ ಸಹಕಾರ ನೀಡಿದರು. ಬಸ್ ಸಿಬ್ಬಂದಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


