ಉಡುಪಿ : ಪೊಲೀಸ್ ಠಾಣೆಯ ಎದುರಿನಲ್ಲೇ ಕಳ್ಳರು ಕೈ ಚಳಕ ತೋರಿಸಿ ಆರು ಮನೆಗಳ ಬೀಗ ಒಡೆದು ಕಳ್ಳತನ ಮಾಡಿದ ಘಟನೆ ಉಡುಪಿ ನಗರ ಪೊಲೀಸ್ ಠಾಣೆಯ ಮುಂದೆ ನಡೆದಿದೆ.
ಸರ್ಕಾರಿ ನೌಕರರ ವಸತಿಗೃಹದಲ್ಲಿ ಈ ಕಳ್ಳತನ ನಡೆಸಲಾಗಿದೆ. ಉಡುಪಿ ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿ ಈ ವಸತಿ ಗೃಹಗಳಿದ್ದು ವೀಕೆಂಡ್ನಲ್ಲಿ ಮನೆಗೆ ಬೀಗ ಹಾಕಿ ಹೋಗಿದ್ದ ಮನೆಯವರು ವಾಪಾಸ್ ಬಂದಾಗ ಈ ವಿಚಾರ ಬೆಳಕಿಗೆ ಬಂದಿದೆ. ಶನಿವಾರದಂದು ಇಲ್ಲಿನ ಹಲವು ಮನೆಯವರು ಬೀಗ ಹಾಕಿ ತಮ್ಮ ಊರುಗಳಿಗೆ ಹಾಗೂ ತಿರುಗಾಡಲು ಅಂತ ಹೋಗಿದ್ದಾರೆ. ಇಂದು ಮುಂಜಾನೆ ಊರಿನಿಂದ ವಾಪಾಸಾಗಿದ್ದು, ಮನೆಗೆ ಬಂದ ವೇಳೆ ಬೀಗ ಮುರಿದಿರುವುದು ಗೊತ್ತಾಗಿದೆ. ವಿಪರ್ಯಾಸ ಅಂದ್ರೆ ಈ ವಸತಿ ಸಮುಚ್ಚಯದ ಆಸುಪಾಸಿನಲ್ಲಿ ಯಾವುದೇ ಸಿಸಿ ಕ್ಯಾಮೆರಾಕೂಡಾ ಇಲ್ಲವಾಗಿದ್ದು, ಕಳ್ಳರ ಸುಳಿವು ಪತ್ತೆಗೆ ಹಿನ್ನೆಡೆ ಆಗಿದೆ. ಮನೆಯವರು ವಾರಾಂತ್ಯದಲ್ಲಿ ಬೀಗ ಹಾಕಿ ಹೋಗುವುದನ್ನು ಗಮನಿಸಿದ ಯಾರದೋ ಕೃತ್ಯ ಇದಾಗಿರಬಹುದು ಎಂಬ ಅನುಮಾನ ಇದೆ. ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನದಳದ ಮೂಲಕ ಕಳ್ಳರನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ. ಬೆರಳಚ್ಚು ಪತ್ತೆಗಾಗಿ ಫೋರೆನ್ಸಿಕ್ ಟೀಮ್ ಕರೆಸಿ ಪರಿಶೀಲನೆ ನಡೆಸಲಾಗಿದೆ. ಎರಡು ಮನೆಯಲ್ಲಿ ನಗದಿನ ಜೊತೆಗೆ ಚಿನ್ನಾಭರಣವನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಚಿನ್ನಾಭರಣ ಕಳೆದುಕೊಂಡು ಮಹಿಳೆಯೊಬ್ಬರು ಕಣ್ಣೀರು ಹಾಕಿ ಘಟನೆಯ ಬಗ್ಗೆ ವಿವರಿಸಿದ್ದಾರೆ.