Saturday, January 17, 2026
Flats for sale
Homeಜಿಲ್ಲೆಉಜಿರೆ ; ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕುತ್ಲೂರು ಶಾಲೆಗೆ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ.

ಉಜಿರೆ ; ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕುತ್ಲೂರು ಶಾಲೆಗೆ ಭೇಟಿ, ವಿದ್ಯಾರ್ಥಿಗಳೊಂದಿಗೆ ಸಂವಾದ.

ಉಜಿರೆ : ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುವುದು ಸರ್ಕಾರ ಮತ್ತು ಸಮಾಜದ ಕರ್ತವ್ಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್, ಎಚ್.ವಿ. ಹೇಳಿದರು. ಅವರು ಶುಕ್ರವಾರ ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪುಟ್ಟ ಮಕ್ಕಳೊಂದಿಗೆ ಸಂವಾದ ನಡೆಸಿ ಹಿತವಚನ ನೀಡಿದರು. ಶಾಲಾ ಆವರಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಪುಟಾಣಿ ಮಕ್ಕಳು ಅವರಿಗೆ ಸಾಂಪ್ರದಾಯಿಕ ವಾಗಿ ಆರತಿ ಬೆಳಗಿ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿದರು. ಬಳಿಕ ಅವರು ಬಿಎಎಸ್ಫ್ ಸಿ ಎಸ್ ಆರ್ ನಿಧಿಯಿಂದ 3.5 ಲಕ್ಷ ರೂಪಾಯಿ ವೆಚ್ಚ ದಲ್ಲಿ ಶಾಲೆಯಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವನೀರಿನ ಘಟಕವನ್ನು ಉದ್ಘಾಟಿಸಿ ಶಾಲಾ ವಠಾರದಲ್ಲಿ ಗಿಡ ನೆಟ್ಟರು. ಬಳಿಕ ತರಗತಿ ಕೋಣೆಯಲ್ಲಿ ಪುಟಾಣಿ ಮಕ್ಕಳೊಂದಿಗೆ ಸಂವಾದ ನಡೆಸಿ ಹಿತವಚನ ನೀಡಿದರು. ಜೋರು ಮಳೆ ಬಂದಾಗ ಶಾಲೆಗಳಿಗೆ ರಜೆ ಕೊಡುವ ಜಿಲ್ಲಾಧಿಕಾರಿ ನಾನೇ ಎಂದು ಮಕ್ಕಳಿಗೆ ತಮ್ಮ ಪರಿಚಯ ಮಾಡಿಕೊಂಡ ಅವರು ಸುಂದರ, ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಕಣ್ಮನ ಸೆಳೆಯುವ ಶಾಲೆಯ ಸೊಗಡನ್ನು ಶ್ಲಾಘಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಶಾಲೆಯ ಶಿಸ್ತು, ಪ್ರಶಾಂತ ವಾತಾವರಣ, ಆಟದ ಮೈದಾನ, ಹೂ ತೋಟ, ಸ್ವಚ್ಛತೆ, ಉತ್ತಮ ಶಿಕ್ಷಕವೃಂದ, ಸಹೃದಯ ಸಾರ್ವಜನಿಕರು ಮೊದಲಾದ ಪೂರಕ ಸೌಲಭ್ಯಗಳನ್ನು ಹೊಂದಿರುವ ನೀವೇ ಭಾಗ್ಯವಂತರು ಎಂದು ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಪ್ರತಿದಿನವೂ ಸುತ್ತಮುತ್ತ ಹಸಿರು ಪರಿಸರ, ಸುಂದರವಾದ ಗುಡ್ಡ-ಬೆಟ್ಟಗಳ ಸೊಗಡನ್ನು ನಿಮಗೆ ಉಚಿತವಾಗಿ ಸವಿಯುವ, ಆಸ್ವಾದಿಸುವ ಸುವರ್ಣಾವಕಾಶವಿದೆ ಎಂದರು.

ಚಿಕ್ಕಮಗಳೂರಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ತಾನು ಕಲಿತ ಪ್ರಾಥಮಿಕ ಶಿಕ್ಷಣದ ಕಷ್ಟಗಳನ್ನು ಅವರು ಸ್ಮರಿಸಿಕೊಂಡರು. ನಿಮ್ಮನ್ನು ಸಾಕಿ-ಸಲಹಿ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸುವ ತಾಯಿ-ತಂದೆ ಮತ್ತು ಗುರುಗಳಿಗೆ ಸದಾ ಗೌರವ ಕೊಟ್ಟು ಅವರ ಸೇವೆಯನ್ನು ಧನ್ಯತೆಯಿಂದ ಸ್ಮರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಸರ್ಕಾರ ಮತ್ತು ಸಮಾಜದ ಸಹಕಾರದಿಂದ ಸಾಧ್ಯವಾದಷ್ಟು ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನ-ಮಾನ ಗಳಿಸಿ ಆದರ್ಶ ನಾಗರಿಕರಾಗಿ ಸಾರ್ಥಕ ಜೀವನ ನಡೆಸಿ ಎಂದು ಹೇಳಿ ಅವರು ಶುಭ ಹಾರೈಸಿದರು.

ಬೆಳ್ತಂಗಡಿ ತಹಶೀಲ್ದಾರ್ ಪೃಥ್ವೀಸಾನಿಕಂ, ಬಿಎಎಸ್ಎಫ್ ಸೈಟ್ ಇಂಜಿನಿಯರ್ ಶ್ರೀನಿವಾಸ್ ಪ್ರಾಣೇಶ್, ಮಾನವ ಸಂಪನ್ಮೂಲ ಅಧಿಕಾರಿ ಸಂತೋಷ. ಪೈ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಕೋಶಾ ಧಿಕಾರಿ ಪುಷ್ಪರಾಜ್ ಬಿ ಎನ್,ನಾರಾವಿ ಗ್ರಾಮಪಂಚಾಯಿತಿ ಸದಸ್ಯರು, ಶಿವಕುಮಾರ್, ಸಂತೋಷ್ ಪೈ, ಸೀತಾರಾಮ, ಪಿ.ಡಿ.ಒ. ಸುಧಾಕರ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕನಕವರ್ಮ ಜೈನ್, ಶಾಲಾ ಮುಖ್ಯೋಪಾಧ್ಯಾಯಿನಿ ಫ್ಲೋವಿಯ ಡಿ ಸೋಜಾ ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular