ಅಫಜಲಪುರ : ಮತಕ್ಷೇತ್ರದಲ್ಲಿನ ರೈತರ ಜಮೀನುಗಳಿಗೆ ಕೆಪಿಟಿಸಿಎಲ್ ನಿಗಮದಿಂದ ನಿಗದಿಪಡಿಸಿದಂತೆ ಸುಗಮವಾಗಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕೆಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಶಾಸಕ ಎಂ.ವೈ.ಪಾಟೀಲ್ ಮನವಿ ಮಾಡಿದರು.
ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರು ಹೆಚ್ಚಿನ ಮುತುವರ್ಜಿ ವಹಿಸಿ ಅಫಜಲಪುರ ತಾಲೂಕಿನ ಭೀಮಾನದಿ ಏತ ನೀರಾವರಿ ಯೋಜನೆಯಿಂದ ರೈತರ ಜಮೀನಿಗೆ ನೀರು ಕೊಡಲಾಗುತ್ತಿದ್ದು, ಈ ಭೀಮಾ ನದಿಯ ಮೇಲೆ ಅನೇಕ ಕುಡಿಯುವ ನೀರಿನ ಯೋಜನೆಗಳು ಕೂಡ ಈ ನದಿಯ ಮೇಲೆ ಅವಲಂಬನೆಯಾಗಿವೆ.ನೀರಾವರಿಗೆ ನಾಲ್ಕು ಬೃಹತ್ ಆಕಾರದ ಪಂಪ್ ಗಳನ್ನು ಅಳವಡಿಸಲಾಗಿದ್ದು, ವಿದ್ಯುತ್ ಸರಬರಾಜು ಸರಿಯಾಗಿ ಇಲ್ಲದ ಕಾರಣ ಕೇವಲ ಒಂದು ಪಂಪ್ ಕೆಲಸ ಮಾಡುತ್ತಿದೆ.ಉಳಿದ 3 ಪಂಪ್ ಗಳು ವಿದ್ಯುತ್ ಸರಬರಾಜು ಇಲ್ಲದ ಕಾರಣ ಅವುಗಳನ್ನು ಬಂದ್ ಮಾಡಲಾಗಿದೆ. ಅಲ್ಲದೆ ಅನೇಕ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು ಕ್ಷೇತ್ರದಲ್ಲಿದ್ದು, ವಿದ್ಯುತ್ ಅಭಾವದಿಂದ ಕೇವಲ ಒಂದೆರಡು ಗಂಟೆ ಮಾತ್ರ ಚಲ್ತಿಯಲ್ಲಿರುತ್ತವೆ.ಉಳಿದ ಸನ್ನಿಹ ವಿದ್ಯುತಿನ ಕೊರತೆಯಿಂದಾಗಿ ಜನರ ಕುಡಿಯುವ ನೀರಿಗೆ ಮತ್ತು ಜನ-ಜಾನುವಾರುಗಳಿಗೆ ನೀರಿನ ಅಭಾವ ಕಂಡು ಬಂದಿದೆ. ಆದ್ದರಿಂದ ಕೆಪಿಟಿಸಿಎಲ್ ನಿಗಮದಿಂದ ನಿಗದಿಪಡಿಸಿದ ದಿನಕ್ಕೆ 7 ಗಂಟೆ ಸುಗಮವಾಗಿ ವಿದ್ಯುತ್ ಸರಬರಾಜು ಮಾಡುತ್ತಿವೆ ಎಂದು ಇಲಾಖೆಯವರು ಹೇಳಿಕೊಂಡಿದ್ದಾರೆ.ಆದರೆ ನಿಜ ಪರಿಸ್ಥಿತಿಯಲ್ಲಿ ವಿದ್ಯುತ್ 1 ಅಥವಾ 2 ಗಂಟೆ ಸಿಗುತ್ತಿದ್ದು ರೈತರು ಬಿತ್ತಿದ ಬೆಳೆಗಳು ಸುಟ್ಟು ಹೋಗಿವೆ.ಆದ್ದರಿಂದ ನಿಗಮದಿಂದ ನಿಗದಿಪಡಿಸಿದ 7 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡುವ ಮೂಲಕ ರೈತರ ನೆರವಿಗೆ ಬರಬೇಕೆಂದು ತಿಳಿಸಿದರು.
ಇಂಧನ ಸಚಿವರು ಕೆ.ಜೆ.ಜಾರ್ಜಾ ಮಾತನಾಡಿ ಕೆಪಿಟಿಸಿಎಲ್ ನಿಗಮದ ಅಧಿಕಾರಿಗಳ ಜತೆ ದೂರವಾಣಿ ಕರೆಯ ಮೂಲಕ ಮಾತನಾಡಿದ್ದೇನೆ.ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಅದನ್ನೂ ತಕ್ಷಣ ಬಗೆಹರಿಸಿ ರೈತರಿಗೆ ನಿಗಮದಿಂದ ನಿಗದಿಪಡಿಸಿದಂತೆ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲು ಸೂಚನೆ ನೀಡಲಾಗಿದೆ
ಈ ಸಮಸ್ಯೆ ಬಗೆಹರಿಸಿ ಇಲಾಖೆಗೆ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ.