ಹಾಸನ : ಸಕಲೇಶಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಊಟದಲ್ಲಿ ಗೊಣ್ಣೆಹುಳುಗಳು ಪತ್ತೆಯಾಗಿದ್ದು ರೋಗಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ.
ಪ್ರತಿದಿನ ರೋಗಿಗಳಿಗೆ ನೀಡುವ ಊಟದಲ್ಲಿ ಹುಳುಗಳು ಪತ್ತೆಯಾಗಿದ್ದು ಊಟ ಮಾಡುತ್ತಿದ್ದ ರೋಗಿಗಳು ಹುಳುಗಳನ್ನು ನೋಡಿ ಗಾಬರಿಗೊಂಡಿದ್ದಾರೆ.
ಊಟದ ಟೆಂಡರ್ ಖಾಸಗಿಯವರಿಗೆ ವಹಿಸಿದ್ದು ಅವರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ರೋಗಿಗಳು ನಿತ್ಯ ಗೋಳು ಅನುಭವಿಸಬೇಕಾಗಿದೆ. ಈ ಬಗ್ಗೆ ಗಮನಹರಿಸಬೇಕಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜಾಣಮೌನ ವಹಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ನೀರಿನ ಟ್ಯಾಂಕ್‌ಗಳು ಕೂಡ ಅಶುಚಿತ್ವದಿಂದ ಕೂಡಿದ್ದು ಹುಳುಗಳ ತಾಣವಾಗಿ ಮಾರ್ಪಟಿದೆ. ಇನ್ನು ಆಸ್ಪತ್ರೆಯಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಿದೆ ಎಂದು ಕೆಲವು ರೋಗಿಗಳು ತಮ್ಮ ಅಳಲನ್ನು ತೋಡಿಕೊಳ್ಳುತಿದ್ದರು.
ಆರೋಗ್ಯ ಇಲಾಖೆ ಮೇಲಾಧಿಕಾರಿಗಳು ಗಮನಹರಿಸಿ ಟೆಂಡರ್‌ದಾರರ ಮೇಲೆ ಕ್ರಮವಹಿಸಬೇಕು. ಹುಳುಗಳನ್ನು ತಿಂದು ಏನಾದರೂ ರೋಗಿಗಳಿಗೆ ಅನಾಹುತವಾಗಿದ್ದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆಯು ಉದ್ಭವವಾಗಿದ್ದು ಇದರಲ್ಲಿ ತಾಲ್ಲೂಕು ಆಡಳಿತಾಧಿಕಾರಿ ಗಳ ನಿರ್ಲಕ್ಷ್ಯವು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ರೋಗಿಗಳಿಗೆ ಊಟ ನೀಡುವುದರಲ್ಲಿ ನಿರ್ಲಕ್ಷ್ಯ ತಾಳಿರುವ ಆಸ್ಪತ್ರೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಕ್ರಮವಹಿಸಬೇಕು ಎಂದು ರೋಗಿಗಳು ಒತ್ತಾಯ ಮಾಡಿದ್ದಾರೆ.
ಆಸ್ಪತ್ರೆ ಸದ್ಯಕ್ಕೆ ಅವ್ಯವಸ್ಥೆಯ ತಾಣವಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಹಾಗೂ ರೋಗಿಗಳು ಒತ್ತಾಯಿಸಿದ್ದಾರೆ .


