ಹಾಸನ ; ಇಳಿ ವಯಸ್ಸಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಕಾಲ ಕಳೆಯಬೇಕಿದ್ದ ವೃದ್ಧೆಯೊಬ್ಬರು ಮಕ್ಕಳ ನಿರ್ಲಕ್ಷಕ್ಕೆ ಒಳಗಾಗಿ ನೋವಿನೊಂದಿಗೆ ದಿನ ದೂಡುತ್ತಿರುವ ಮನ ಕಲಕುವ ಘಟನೆಯೊಂದು ಬೆಳಕಿಗೆ ಬಂದಿದ್ದು ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ತಹಶಿಲ್ದಾರ್ ಮಮತಾ ಎಂ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವೃದ್ಧೆಗೆ ಸಾಂತ್ವನ ಹೇಳಿದ್ದಾರೆ.
ಬೇಲೂರು ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಹೊನ್ನಮ್ಮ ಹನುಮೇಗೌಡ ಎಂಬ ವೃದ್ಧೆ ಮಕ್ಕಳ ನಿರ್ಲಕ್ಷ್ಯಕ್ಕೆ ಒಳಗಾಗಿ ಗುಡಿಸಲೊಂದರಲ್ಲಿ ಹೊತ್ತಿನ ಅನ್ನಕ್ಕಾಗಿ ಪರದಾಡುವ ಸ್ಥಿತಿಯಲ್ಲಿದ್ದಾರೆ. ಆಕೆಯ ಹೆಸರಲ್ಲಿನಲ್ಲಿದ್ದ ಆಸ್ತಿಯನ್ನು ತಮ್ಮಿಬ್ಬರು ಮಕ್ಕಳು ಪಡೆದು ತಾಯಿಯ ಸಾಕುವಲ್ಲಿ ಹಿಂಜರಿದು ಎಲ್ಲಾ ವಿಚಾರದಲ್ಲೂ ಈ ವೃದ್ಧೆಯದ್ದೇ ತಪ್ಪೆಂದು ಬಿಂಬಿಸಿ ಬೇರೆಡ ವಾಸವಿದ್ದಾರೆ ಎಂಬುದು ಗ್ರಾಮಸ್ಥರ ದೂರು.
ಈ ತಾಯಿಯ ಸ್ಥಿತಿ ಕಂಡು ಮರುಗಿದ ಸುತ್ತಲಿನ ಜನರು ಆಕೆಯ ಊಟ, ಬಟ್ಟೆ ಆಸ್ಪತ್ರೆ ಖರ್ಚಿಗೆ ಸಹಾಯ ಮಾಡುತ್ತಿದ್ದಾರೆ, ಸುಮಾರು 80 ವರ್ಷ ವಯಸ್ಸಾಗಿರುವ ಹಿರಿ ಜೀವ ತನ್ನ ಯೌವ್ವನದಲ್ಲಿ ಮಕ್ಕಳಿಗಾಗಿ ಶ್ರಮವಹಿಸಿ ಅವರಿಗೆ ನೆಲೆ ಮಾಡಿಟ್ಟು, ಒಂದೊಳ್ಳೆ ಸಂಬಂಧ ಹಿಡಿದು ಮದುವೆ ಮಾಡಿಸಿ ಜಮೀನುನಲ್ಲಿ ಸಮಾನವಾಗಿ ಹಂಚಿದ ತಾಯಿಗೆ ಆಸರೆಯಾಗಬೇಕಾದ ಸಮಯದಲ್ಲಿ ಮಕ್ಕಳು ಮೀನಮೇಷ ಎಣಿಸಿ ಮನೆಯಿಂದ ಹೊರ ದಬ್ಬಿ ಅಮಾನವೀಯತೆ ಮೆರೆದಿದ್ದಾರೆ. ಮಕ್ಕಳ ಸುಖಕ್ಕೆ ಅಡ್ಡಿಯಾಗದೆ ತಾನೇ ಒಂದು ಗುಡಿಸಲಿನಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ.
ಇನ್ನೂ ಗ್ರಾಮಸ್ಥರ ದೂರು ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಶಿಲ್ದಾರ್ ಮಮತಾ ಎಂ. ವೃದ್ದೆಯ ಸ್ಥಿತಿಗೆ ಕಾರಣರಾದ ಆಕೆಯ ಮಕ್ಕಳ ಕರೆಸಿ ತರಾಟೆ ತೆಗೆದುಕೊಂಡ ಅವರು, ಇಳಿ ವಯಸ್ಸಿನ ತಾಯಿಗೆ ನೆರವಾಗದೆ ಇರುವುದಕ್ಕೆ ಶಿಕ್ಷೆಗೆ ಒಳಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಮಕ್ಕಳಿಗಾಗಿ ಜೀವನವನ್ನೇ ತ್ಯಾಗ ಮಾಡಿದ ತಾಯಿಯನ್ನು ನಿರ್ಲಕ್ಷ್ಯ ಮಾಡಲು ಹೇಗೆ ಮನಸ್ಸು ಬರುತ್ತದೆ ಎಂದು ವಾಗ್ದಾಳಿ ನಡೆಸಿ, ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ. ತನ್ನ ಮಕ್ಕಳು ಸುಖವಾಗಿರಲಿ ಎಂದು ಜೀವನವಿಡಿ ಶ್ರಮಿಸುವ ಯಾವ ತಾಯಿಗೂ ಇಂತಹ ಸ್ಥಿತಿ ಬರಬಾರದು. ಕೊನೆಗಳಿಗೆಯಲ್ಲಿ ಸಂತೋಷದಿಂದ ನೆಮ್ಮದಿಯಾಗಿ ಜೀವ ಬಿಟ್ಟರೆ ಅದೇ ಮಕ್ಕಳಿಗೆ ಆಶೀರ್ವಾದ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಎಂದ ಅವರು ವೃದ್ಧೆಗೆ ಸರ್ಕಾರದಿಂದ ದೊರಕಿಸಬಹುದಾದ ಪಿಂಚಣಿ ಮತ್ತು ಗೃಹ ಲಕ್ಷ್ಮಿ ಯೋಜನೆಯ ಸೌಲಭ್ಯದ ಬಗ್ಗೆ ಗಮನ ಹರಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹಾಗೂ ವೃದ್ಧೆಯ ಯೋಗಕ್ಷೇಮ ವಿಚಾರಿಸುವಂತೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸೂಚನೆ ನೀಡಿದರು.


