ವಿಜಯಪುರ : ತಾಲೂಕಿನ ಖೇಡಗಿ ಬಳಿ ಶುಕ್ರವಾರ 38 ವರ್ಷದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳು ಭೀಮಾ ನದಿಗೆ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಗೀತಾ ಮತ್ತು ಅವರ ಇಬ್ಬರು ಮಕ್ಕಳಾದ ಶೋಬಿತಾ (12) ಮತ್ತು ವಾಸುದೇವ್ (10) ಶುಕ್ರವಾರ ಬೆಳಗ್ಗೆ ಬಟ್ಟೆ ತೊಳೆಯಲು ನದಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ನಾಪತ್ತೆಯಾಗಿದ್ದ ತನ್ನ ಪತ್ನಿ ಮತ್ತು ಮಕ್ಕಳನ್ನು ಹುಡುಕಲು ಗಾರೆ ಕೆಲಸಗಾರ ಸುರೇಶ್ ನದಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಭೀಮಾ ನದಿಯ ದಡದಲ್ಲಿ ಪತ್ನಿ ಮತ್ತು ಮಕ್ಕಳ ಚಪ್ಪಲಿ ಮತ್ತು ಬಟ್ಟೆಗಳನ್ನು ಗಮನಿಸಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರ ನೆರವಿನಿಂದ ಪೊಲೀಸರು ನದಿಯಲ್ಲಿ ಮೂವರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇಂಡಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


