ರಿಪ್ಪನ್ ಪೇಟೆ : ಈ ಬಾರಿ ಕೈಕೊಟ್ಟ ಮಳೆಯಿಂದಾಗಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಮಲೆನಾಡಿನ ಹೊಸನಗರ ತಾಲೂಕಿನ ರೈತ ಸಮೂಹದಲ್ಲಿ ಆತಂಕ ಮನೆ ಮಾಡಿದ್ದು ತಾಲ್ಲೂಕಿನಾದ್ಯಂತ ಬರದ ಛಾಯೆ ಆವರಿಸಿದೆ.ಮಳೆಗಾಗಿ ದೇವಸ್ಥಾನ ಹಾಗೂ ಮಠ ಮಂದಿರಗಳಲ್ಲಿ ರೈತರುಗಳು ಹಾಗೂ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ
ಮುಂದೇನು ಎಂಬ ಚಿಂತೆ :
ಒಂದು ತಿಂಗಳಿನಿಂದ ಬೇಸಿಗೆಯಂಥ ಸುಡು ಬಿಸಿಲಿನ ವಾತಾರಣ ಇರುವುದರಿಂದ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಹಳ್ಳ ತೊರೆಗಳು ಬತ್ತಿ ಹೋಗಿವೆ. ಕೆರೆಗಳಲ್ಲೂ ನೀರು ಖಾಲಿಯಾಗುತ್ತಿದೆ. ಆಗಸ್ಟ್‌ನಲ್ಲೇ ಈ ಸ್ಥಿತಿಯಾದರೆ ಮುಂದೇನು ಎಂಬ ಚಿಂತೆ ಕೃಷಿಕರಲ್ಲಿ ಕಾಡುವಂತಾಗಿದೆ.
ಕಾಡು ಪ್ರಾಣಿಗಳ ಕಾಟ :
ಈಗಾಗಲೇ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬೆನವಳ್ಳಿ ಗ್ರಾಮದ ಬೈರಾಪುರ ಮಜರೆ ಗ್ರಾಮದ ಮಂಜುನಾಥ ಭಂಡಾರಿ ಎಂಬ ರೈತ ನಾಟಿ ಮಾಡಿದ ಭತ್ತದ ಗದ್ದೆಗೆ ಜಿಂಕೆಗಳೊಂದಿಗೆ,ಕಾಡುಕೋಣ, ನವಿಲು, ಹಾಗೂ ಕಾಡು ಪ್ರಾಣಿಗಳ ಕಾಟದಿಂದಾಗಿ ಭತ್ತದ ನಾಟಿಗದ್ದೆ ಆಹುತಿಯಾಗುತ್ತಿದ್ದರೆ ಮಳೆ ಬಾರದ ಕಾರಣ ಭತ್ತ, ಮುಸುಕಿನಜೋಳ, ಅಡಿಕೆ, ತೆಂಗು,ಶುಂಠಿ, ಕಬ್ಬು, ಬಾಳೆ, ಕಾಳುಮೆಣಸು ಇನ್ನಿತರ ಬೆಳೆಗಳು ಒಣಗುವಂತಾಗಿದ್ದು ರೈತರಲ್ಲಿ ಮತ್ತಷ್ಟು ಆತಂಕ ಮನೆಮಾಡಿದೆ.
ಬತ್ತಿದ ಜಲಮೂಲಗಳು :
ಹೊಸನಗರ ತಾಲ್ಲೂಕಿನಲ್ಲಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬಿಸಿಲಿನಿಂದ ಜಲ ಮೂಲಗಳು ಬತ್ತಿ ಹೋಗಿರುವುದರಿಂದ ಕುಡಿಯುವ ನೀರಿಗೂ ಸಂಚಕಾರ ಎದುರಾಗಿದೆ. ಮಳೆಯನ್ನೇ ನಂಬಿ ನಾಟಿ ಮಾಡಿದ್ದ ಭತ್ತದ ಗದ್ದೆಗಳು ಸಂಪೂರ್ಣವಾಗಿ ಒಣಗಿ ದೃಶ್ಯ ಎಲ್ಲೆಡೆ ಕಂಡು ಬರುತ್ತಿದೆ.
ಹೊಸನಗರ ತಾಲೂಕಿನ ಹುಂಚ ಮತ್ತು ಕೆರೆಹಳ್ಳಿ ಹೋಬಳಿಯ ಕೋಡೂರು, ಹುಂಚ, ಅಮೃತ, ಹೆದ್ದಾರಿಪುರ, ಕೆರೆಹಳ್ಳಿ, ಗವಟೂರು, ಅರಸಾಳು, ಕೆಂಚನಾಲ, ಬೆಳ್ಳೂರು, ಬಸವಾಪುರ, ಬುಕ್ಕಿವರೆ, ದೋಬೈಲು, ಬರುವೆ, ಮುಡುಬ, ಬೈರಾಪುರ, ಸೇರಿದಂತೆ ಹಲವಾರು ಗ್ರಾಮಗಳಲ್ಲಿ ರೈತರುಗಳು ಬೋರ್‌ವೆಲ್ ನೀರು ಹರಿಸಿ ಸಕಾಲದಲ್ಲಿ ನಾಟಿ ಮಾಡಿಕೊಂಡು ಮುಗಿಲು ನೋಡುವಂತಾಗಿದ್ದರೆ, ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಸಸಿಯನ್ನು ಜಿಂಕೆ, ಕಾಡುಕೋಣ, ನವಿಲು, ಇನ್ನಿತರ ಕಾಡು ಪ್ರಾಣಿಗಳಿಂದಾಗಿ ಬೆಳೆ ಉಳಿಸಿಕೊಳ್ಳುವುದೇ ಕಷ್ಟಕರವಾಗಿದೆ.
ಮಲೆನಾಡಿನಲ್ಲಿ ಜೂನ್ 10 ರಿಂದ ಮಳೆ ಆರಂಭವಾಗಬೇಕಾದ ಮುಂಗಾರು ಮಳೆ ವಿಫಲವಾದರೂ ಜುಲೈ ಆರಂಭದಿಂದ ಮಳೆ ಬಿರುಸು ಕಂಡಿತ್ತು ಆದರೆ ಆಗಸ್ಟ್ ತಿಂಗಳಲ್ಲಿ ಮಳೆ ಮಾಯವಾಗಿ ಬಿಸಿಲ ಝಳ ಜೋರಾಗಿ ಅಂತರ್ಜಲದ ಕೊರತೆ ಭತ್ತದ ಬೆಳೆಯ ಮೇಲೆ ತೀವ್ರ ಪರಿಣಾಮ ಉಂಟು ಮಾಡಿದೆ.
889 ಮಿ.ಮೀ. ಮಳೆ ಕೊರತೆ :
ತಾಲ್ಲೂಕಿನಲ್ಲಿ ವಾಡಿಕೆ ಮಳೆ 2.541 ಮಿ.ಮೀ. ಇದುವರೆಗೆ 1652 ಮಿ.ಮೀ.ಮಳೆಯಾಗಿದ್ದು 889 ಮಿ.ಮೀ. ಮಳೆ ಕೊರತೆ ಕಂಡು ಬಂದಿದೆ. ತಾಲ್ಲೂಕಿನಲ್ಲಿ ಬಿಸಿಲ ಝಳ ಹೆಚ್ಚಾಗಿದ್ದು ರೈತರ ಅಡಿಕೆ, ಶುಂಠಿ, ಭತ್ತ, ಮೆಕ್ಕಜೋಳ ನೀರಿಲ್ಲದೆ ಒಣಗುತ್ತಿದ್ದು ತೆರೆದ ಮತ್ತು ಕೊಳವೆ ಬಾವಿಯಲ್ಲಿ ಸಹ ನೀರು ಕಡಿಮೆಯಾಗಿದೆ, ಕೆಲವೇ ದಿನಗಳಲ್ಲಿ ಬಿಸಿಲು ಹೀಗೆ ಮುಂದುವರಿದರೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎದುರಾಗ ಬಹುದೆಂದು ರೈತರು ಆತಂಕದಲ್ಲಿದ್ದಾರೆ.