ರಾಮನಗರ : ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಕೊನೆಗೂ ಓರ್ವನನ್ನು ಬಂಧಿಸಲಾಗಿದೆ. ರಿಕ್ಕಿ ರೈ ಅವರ ಅಂಗರಕ್ಷಕ ಮೂನಪ್ಪ ವಿಠಲ್ ಎಂಬಾತನನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದು ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 10 ದಿನಗಳ ಕಸ್ಟಡಿಗೆ ತೆಗೆದು ಕೊಂಡಿದ್ದಾರೆ.
ಸುಮಾರು 53 ವರ್ಷದ ಮೂನಪ್ಪ ವಿಠಲ್ ಕೊಡಗು ಮೂಲದವನಾಗಿದ್ದು, ಮುತ್ತಪ್ಪ ರೈಗೆ 30 ವರ್ಷಗಳ ಕಾಲ ಅಂಗರಕ್ಷಕನಾಗಿದ್ದ. ಅವರ ನಿಧನದ ಬಳಿಕ, ಪುತ್ರ ರಿಕ್ಕಿಗೂ ಅಂಗರಕ್ಷಕನಾಗಿ ಕೆಲಸ ಮಾಡುತ್ತಿದ್ದನು. ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ದ ಆತನಿಗೆ ಸ್ಟಂಟ್ ಕೂಡ ಅಳವಡಿಸಲಾಗಿತ್ತು. ಆದ್ದರಿಂದ ಬಿಡದಿ ಮನೆಯ ಭದ್ರತೆಯ ಜವಾಬ್ದಾರಿ ವಹಿಸಲಾಗಿತ್ತು ಎಂದು ಹೇಳಲಾಗಿದೆ.
ರಿಕ್ಕಿ ರೈ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ದಂತೆ ಸತತ 4 ದಿನಗಳಿಂದ ಪೊಲೀಸರು ದೂರಿನಲ್ಲಿ ಹೆಸರಿರುವ ರಾಕೇಶ್ ಮಲ್ಲಿ, ನಿತೀಶ್ ಶೆಟ್ಟಿ ಅವರ ಜತೆಗೆ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಶಯಕ್ಕೆ ಕಾರಣ ವಾಗಿದ್ದ ರಿಕ್ಕಿ ರೈ ಅವರ ಅಂಗ ರಕ್ಷಕನನ್ನು ವಿಚಾರಣೆಗೆ ಒಳಪ ಡಿಸಿ ಆತನ ಬಂದೂಕನ್ನು ವಶಕ್ಕೆ ಪಡೆದಿದ್ದರು.
ಸಾಕಷ್ಟು ಗೊಂದಲ ಮೂಡಿಸಿದ್ದ ಪ್ರಕರಣವನ್ನು ಬೇದಿಸಲು ಜಿಲ್ಲಾ ಎಸ್ಪಿ ಶ್ರೀನಿವಾಸಗೌಡರವರು ಮೂವರು ಡಿವೈಎಸ್ಪಿಗಳ ನೇತೃತ್ವದ ತನಿಖಾ ತಂಡಗ ಳನ್ನು ರಚಿಸಿದ್ದರು. ಈ ತಂಡಗಳು ಫೀಲ್ಡಿಗಿಳಿದು ಆರೋಪಿಗಳು ಹಾಗೂ ಸಂಶಯಾಸ್ಪದ ವ್ಯಕ್ತಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಂತೆ ಗಾಯಾಳು ರಿಕ್ಕಿ ರೈ ಅವರ ಮತ್ತೊಬ್ಬ ಗನ್ ಮ್ಯಾನ್ ಮನಪ್ಪ ವಿಠಲ್ ಎಂಬಾತ ಅನಾರೋಗ್ಯದ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದನು. ಆತನ ಚಲನ ವಲನಗಳು ಅನುಮಾನ ಮೂಡಿಸಿದ್ದ ಕಾರಣ ಪೊಲೀಸರು ಗುರುವಾರ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಆತನನ್ನು ಬಂಧಿಸಿದ್ದಾರೆ.


