ಮೊಳಕಾಲ್ಮುರು ; ರಾತ್ರಿ ವೇಳೆ ಕೈಯಲ್ಲಿ ಲಾಂಗ್ ಮತ್ತು ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ದರೋಡೆ ನಡೆಸಲು ಸಂಚು ರೂಪಿಸಿ ರಾಂಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರನ್ನು ಬೆಚ್ಚಿಬಿಳಿಸಿದ್ದ ಖತರ್ನಾಕ್ ಕಳ್ಳನನ್ನು ಹಿಡಿದು ಹೆಡೆಮುರಿ ಕಟ್ಟುವಲ್ಲಿ ರಾಂಪುರ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಖದೀಮರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಂಪುರ ಪೊಲೀಸರು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಐಪಿಎಸ್ ಮಾರ್ಗದರ್ಶನದ ಮೇರೆಗೆ ಬಳ್ಳಾರಿಯಲ್ಲಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನು ಬಳ್ಳಾರಿಯ ಗುಗ್ಗರಿಹಟ್ಟಿ ಗ್ರಾಮದ ಲೋಕೇಶ್(29) ಎಂದು ತಿಳಿದು ಬಂದಿದ್ದು,ಹಡಗಲಿ,ಹರಪ್ಪನಹಳ್ಳಿ,ಕೂಡ್ಲಿಗಿ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಕಳ್ಳತನ, ದರೋಡೆ ಸೇರಿದಂತೆ 14 ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.ಈ ಕಳ್ಳನ ದೈಹಿಕ ಚಲನವಲನಗಳ ಆಧಾರದ ಮೇಲೆ ಸಿಸಿಟಿವಿ ದೃಶ್ಯಾವಳಿಗಳನ್ನು ಆಧಾರಿಸಿ ಖಚಿತ ಮಾಹಿತಿ ಮೇರೆಗೆ ಪೋಲಿಸರು ಬಂಧಿಸಿದ್ದಾರೆ.
ಬಂಧಿತನಿಂದ ಕೃತ್ಯಕ್ಕಾಗಿ ಬಳಸುತ್ತಿದ್ದ ಸ್ಕೂಡೈವರ್,ಕಬ್ಬಿಣದ ರಾಡ್,ಮಂಕಿ ಕ್ಯಾಪ್,ಕೈಗೆ ಬಳಸುತ್ತಿದ್ದ ಗ್ಲೋಸ್ ಹಾಗೂ ಐದು ಸಾವಿರ ರೂಪಾಯಿ ಹಣ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನುಳಿದಂತೆ ಇದೇ ಗ್ಯಾಂಗ್ ನಲ್ಲಿದ್ದ ಇಬ್ಬರೂ ಕಳ್ಳರು ಅನಂತಪುರ ಜಿಲ್ಲೆಯ ಜೈಲಿನಲ್ಲಿದ್ದಾರೆ.
ಒಟ್ಟಿನಲ್ಲಿ ಹಲವಾರು ದಿನಗಳಿಂದ ರಾಂಪುರ ಸೇರಿದಂತೆ ಹಲವು ಗ್ರಾಮಗಳನ್ನು ಬೆಚ್ಚಿಬಿಳಿಸಿ ಜನರ ನಿದ್ದೆಗೆಡಿಸಿದ್ದ ಕಳ್ಳನನ್ನು ಹಿಡಿಯುವಲ್ಲಿ ಕೆಲವೇ ದಿನಗಳಲ್ಲಿ ಯಶಸ್ವಿಯಾದ ರಾಂಪುರ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು,ರಾಂಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ನಿಟ್ಟುಸಿರು ಬಿಡುವಂತಾಗಿದೆ.


