ಮೈಸೂರು : ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿದಂತೆ ಭೂಮಿ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಶುಕ್ರವಾರ ಮುಡಾ ಕಚೇರಿ ಹಾಗೂ ತಹಸೀಲ್ದಾರ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಇಡಿ ಅಧಿಕಾರಿಗಳ ಜೊತೆ ಇಪ್ಪತ್ತಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಆಗಮಿಸಿದ್ದು ಸಿಆರ್ ಪಿಎಫ್ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರ ಸಾಥ್ ನೀಡಿದ್ದಾರೆ. ಮುಡಾ ಕಚೇರಿಗೆ ಯಾರೂ ಬರದಂತೆ ಅಧಿಕಾರಿಗಳು ತಡೆಯುತ್ತಿದ್ದು,ಸಾರ್ವಜನಿಕ ಸೇವೆಗೂ ಕೂಡ ಮುಡಾ ಅಲಭ್ಯವಾಗಿದೆ. ಮುಡಾದ ಅಧ್ಯಕ್ಷ ಹಾಗು ಕಾರ್ಯದರ್ಶಿ ಕಚೇರಿಯಲ್ಲಿ ತೀವ್ರ ಶೋಧ ನಡೆಸುತ್ತಿದ್ದು ಮಹತ್ವದ ದಾಖಲೆಗಳನ್ನು ಪತ್ತೆಹಚ್ಚುತ್ತಿದ್ದರೆಂದು ತಿಳಿದುಬಂದಿದೆ.
ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರು ಆಧರಿಸಿ ಈ ದಾಳಿ ನಡೆಸಲಾಗಿದೆ. ಬೆಳಗ್ಗೆ 11:30 ಕ್ಕೆ ದಾಳಿ ಇ.ಡಿ ದಾಳಿ ನಡೆಸಿದೆ. ಮುಡಾ ಅಧಿಕಾರಿಗೆ ಸಮನ್ಸ್ ನೀಡಿದ್ರೂ ದಾಖಲೆ ಕೊಡದ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಾರೆ.ಅಲ್ಲದೇ ಹಗರಣ ಸಂಬಂಧ 500 ಪುಟಗಳ ದಾಖೆಯನ್ನು ಇಡಿಗೆ ನೀಡಿದ್ದರು.
ದಾಖಲೆಗಳ ಆಧಾರದ ಮೇಲೆ ಇಡಿ ಇಸಿಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ. ಇದೀಗ ಇಡಿ, ಮುಡಾ ಕಚೇರಿ ಮತ್ತು ಭೂ ಮಾಲೀಕ ದೇವರಾಜು ಮನೆ ಮೇಲೆ ದಾಳಿ ಮಾಡಿದೆ. ಹಗರಣದಲ್ಲಿ ದೇವರಾಜು ಎ4 ಆಗಿದ್ದಾರೆ. ಬೆಂಗಳೂರಿನ ಕೆಂಗೇರಿಯಲ್ಲಿರುವ ದೇವರಾಜು ನಿವಾಸದಲ್ಲಿ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಮುಡಾ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಹರಿಯಾಣ ಚುನಾವಣೆಯಲ್ಲಿ ಪ್ರಸ್ತಾಪ ಮಾಡಿದ್ದರು. ಇದರಿಂದ ಕಾಂಗ್ರೆಸ್ಗೆ ಮುಜುಗರ ಉಂಟಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರಿಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡುವ ಸಾಧ್ಯತೆಯೂ ಇದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗಿದೆ ಎಂಬ ಮಾಹಿತಿ ದೊರೆತಿದೆ.