ಮುಂಬೈ : ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಮತ್ತೊಮ್ಮೆ ಉಗ್ರರ ದಾಳಿಯ ಭೀತಿ ಎದುರಾಗಿದೆ.ಈ ಬಗ್ಗೆ ದೇಶದ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಯಾವುದೇ ಅನುಮಾನಾಸ್ಪದ ಚಟುವಟಿಕೆಯ ಬಗ್ಗೆ ವರದಿ ಮಾಡಲು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿದ್ದು, ನಗರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ವಿವಿಧೆಡೆ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಇದಲ್ಲದೇ ಜನಸಂದಣಿ ಇರುವ ಸ್ಥಳಗಳಲ್ಲಿ ಶೋಧ ಕಾರ್ಯದ ಜತೆಗೆ ಅಣಕು ಕಾರ್ಯಾಚರಣೆ ನಡೆಸುವಂತೆಯೂ ಆದೇಶ ಹೊರಡಿಸಲಾಗಿದೆ.
ಮಹಾನಗರ ಮುಂಬೈನಲ್ಲಿ ಭೀತಿ ಹುಟ್ಟಿಸಲು ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಭದ್ರತಾ ಏಜೆನ್ಸಿಯ ಎಚ್ಚರಿಕೆಯ ನಂತರ, ಮುಂಬೈನ ಅನೇಕ ಧಾರ್ಮಿಕ ಸ್ಥಳಗಳು ಮತ್ತು ಇತರ ಜನನಿಬಿಡ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಜನನಿಬಿಡ ಸ್ಥಳಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಅಣಕು ಕಸರತ್ತು ನಡೆಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ನಗರದ ಎಲ್ಲಾ ಡಿಸಿಪಿಗಳು ತಮ್ಮ ತಮ್ಮ ವಲಯಗಳಲ್ಲಿ ಭದ್ರತಾ ವ್ಯವಸ್ಥೆಗಳ ಬಗ್ಗೆ ವಿಶೇಷ ಗಮನ ಹರಿಸುವಂತೆ ತಿಳಿಸಲಾಗಿದೆ. ಮುಂಬೈ ದುರ್ಗಾಪೂಜೆ, ದಸರಾ ಮತ್ತು ದೀಪಾವಳಿಯಂತಹ ದೊಡ್ಡ ಹಬ್ಬಗಳಿಗೆ ಸಜ್ಜಾಗಿದೆ . ಇದಲ್ಲದೇ ನವೆಂಬರ್ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ನಗರದಲ್ಲಿ ಸಿದ್ಧತೆ ನಡೆದಿದೆ.
ಮುಂಬರುವ ಹಬ್ಬಗಳು ಮತ್ತು ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟುನಿಟ್ಟಿನ ಭದ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾಟುಂಗಾದಲ್ಲಿ ಬೆಳಿಗ್ಗೆ ಪೊಲೀಸ್ ತಪಾಸಣೆಯ ನಂತರ ದೇವಾಲಯವನ್ನು ಮುಚ್ಚಲಾಗಿದೆ.