ಮುಂಬೈ : ಖ್ಯಾತ ಬಾಲಿವುಡ್ ನಟ ಸಲ್ಮಾನ್‌ಖಾನ್ ಅವರೊಂದಿಗಿನ ವೈಷಮ್ಯ ಅಂತ್ಯಗೊಳಿಸಲು 5 ಕೋಟಿ ನೀಡಬೇಕೆಂದು ಮುಂಬೈ ಪೊಲೀಸರಿಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ವಾಟ್ಸಾಪ್ ಮೂಲಕ ಬೆದರಿಕೆ ಸಂದೇಶ ರವಾನಿಸಿದೆ.
ಈ ಸಂದೇಶ ಮುಂಬೈ ನಗರವನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು, ಸಲ್ಮಾನ್‌ಖಾನ್‌ಗೆ ಇನ್ನು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.
ಇತ್ತೀಚೆಗಷ್ಟೇ ಎನ್‌ಸಿಪಿ ನಾಯಕ ಬಾಬಾ ಸಿದ್ಧಿಕಿ ಅವರ ಹತ್ಯೆಗಿಂತ ಕ್ರೂರವಾಗಿ ಸಲ್ಮಾನ್‌ಖಾನ್ ಅವರನ್ನು ಕೊಲ್ಲುವುದಾಗಿ ಬಿಷ್ಣೋಯಿ ಗ್ಯಾಂಗ್ ಬೆದರಿಕೆ ಹಾಕಿದೆ. ಈ ಕುರಿತು ಮಾಹಿತಿ ನೀಡಿರುವ ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಇಸ್ಮಾ —ಈ ವಿಚಾರವನ್ನು ಲಘುವಾಗಿ ಪರಿಗಣಿಸಬೇಡಿ ಸಲ್ಮಾನ್‌ಖಾನ್ ಬದುಕಬೇಕು.ಲಾರೆನ್ಸ್ ಬಿಷ್ಣೋಯಿ ಜತೆಗಿನ ವೈಷಮ್ಯವನ್ನು ಕೊನೆಗಾಣಿಸಬೇಕಾದರೆ ೫ ಕೋಟಿ ನೀಡಬೇಕು. ಹಣ ಪಾವತಿ ಮಾಡದಿದ್ದರೆ ಬಾಬಾ ಸಿದ್ಕಿಕಿ ಪರಿಸ್ಥಿತಿ ಸಲ್ಮಾನ್‌ಗೂ ಎದುರಾಗುತ್ತದೆ. ಅದಕ್ಕಿಂತ ಕೆಟ್ಟದಾಗಬಹುದು ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಪರಿಗಣಿಸಿ ಮುಂಬೈ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ನಿಜವಾಗಿಯೂ ಯಾವುದಾದರೂ ಗ್ಯಾಂಗ್‌ನಿಂದ ಈ ಬೆದರಿಕೆ ಬಂದಿದೆಯೇ ಅಥವಾ ಪೊಲೀಸರಿಗೆ ಕಿರುಕುಳ ನೀಡಲು ವ್ಯಕ್ತಿಯೊಬ್ಬರು ಈ ರೀತಿ ಕೆಲಸ ಮಾಡಿದ್ದಾರೆಯೇ ಎಂಬ ವಿಷಯವನ್ನು ಪೊಲೀಸರು ಖಚಿತಪಡಿಸಿಲ್ಲ.
ಕಳೆದ ಕೆಲವು ದಿನಗಳಿಂದ ಪೊಲೀಸರಿಗೆ ನಕಲಿ ಬೆದರಿಕೆ ಕರೆಗಳು ಹಾಗೂ ಸಂದೇಶಗಳು ಬರುತ್ತಿರುವುದರಿಂದ ಪೊಲೀಸರು ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ತನಿಖೆ ಕೈಗೊಂಡಿದ್ದಾರೆ. ಎನ್‌ಸಿಪಿ ನಾಯಕ ಬಾಬಾಸಿದ್ಧಿಕಿ ಮತ್ತು ನಟ ಸಲ್ಮಾನ್‌ಖಾನ್ ನಡುವೆ ಆತ್ಮೀಯ ಸಂಬಂಧವಿತ್ತು. ಸಿದ್ಧಿಕಿ ಹತ್ಯೆ ಬೆನ್ನಲ್ಲೆ ಈಗ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬಿಷ್ಣೋಯಿ ಗ್ಯಾಂಗ್ ಬೆದರಿಕೆ ಹಾಕಿದ್ದಾರೆ.
ಹೀಗಾಗಿ ಸಲ್ಮಾನ್‌ಖಾನ್ ಅವರಿಗೆ ಪದೇ ಪದೇ ಇಂತಹ ಬೆದರಿಕೆಯ ಸಂದೇಶ ಬರುತ್ತಿರುವ ಹಿನ್ನೆಲೆಯಲ್ಲಿ ವೈ ಪ್ಲಸ್ ಭದ್ರತೆ ಒದಗಿಸಲಾಗಿದೆ. ಮುಂಬೈನಲ್ಲಿರುವ ಅವರ ನಿವಾಸದ ಮುಂದೆ 25ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇವರಲ್ಲಿ 2 ರಿಂದ 4 ಎನ್‌ಎಸ್‌ಜಿ ಕಮಾಂಡೊ ಮತ್ತು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಇದರ ಜತೆಗೆ ಸಲ್ಮಾನ್‌ಖಾನ್ ಬೆಂಗಾವಲಿಗೆ ಅವರು ತೆರಳುವ ಕಡೆಯಲ್ಲೆಲ್ಲ 2 ರಿಂದ 3 ಬೆಂಗಾವಲು ಬುಲೆಟ್‌ಪ್ರೂಫ್ ವಾಹನದಲ್ಲಿ ಸಂಚರಿಸಲಿದ್ದಾರೆ.
ಈ ಹಿಂದೆಯೂ ಸಲ್ಮಾನ್‌ಖಾನ್ ಅವರ ಹತ್ಯೆಗೆ ಯತ್ನ ನಡೆದಿತ್ತು, ದುಷ್ಕರ್ಮಿಗಳು ಅವರ ನಿವಾಸದ ಬಳಿಯೇ ಗುಂಡು ಹಾರಿಸಿದ್ದರು. ಇದೂ ಕೂಡ ಆತಂಕಕ್ಕೆಡೆ ಮಾಡಿಕೊಟ್ಟಿತ್ತು. ಈ ಘಟನೆ ನಡೆದಾಗಿನಿಂದ ಸಲ್ಮಾನ್ ಖಾನ್ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಈಗ ಬಿಷ್ಣೋಯಿ ಗ್ಯಾಂಗ್‌ಸ್ಟರ್‌ನಿಂದ ಮತ್ತೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಸಲ್ಮಾನ್‌ಖಾನ್‌ಗೆ ಇನ್ನಷ್ಟು ಭದ್ರತೆಯನ್ನುಒದಗಿಸಲಾಗಿದೆ.