ಮಂಡ್ಯ : ಕರ್ನಾಟಕ ರಾಜ್ಯದಲ್ಲಿ ಮಂಡ್ಯದ ಟಿಕೆಟ್ ಇನ್ನೂ ಬಗೆಹರೆಯದಂತಾಗಿದೆ.ಇದರ ನಡುವೆ ಚುನಾವಣೆಯ ಕಾವು ರಂಗೇರಿದ್ದು ರಾಜ್ಯದ ಕೆಲ ಕ್ಷೇತ್ರಗಳ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮಂಡ್ಯದಲ್ಲಿಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ನಡುವೆ ಟಿಕೆಟ್ ಗಾಗಿ ಹಗ್ಗಜಗ್ಗಾಟ ನಡೆಯುತ್ತಿರುವುದು ತಿಳಿದುಬಂದಿದೆ.
ಬಿಜೆಪಿ ರಾಷ್ಟ್ರೀಯ ನಾಯಕ ಜೆಪಿ ನಡ್ಡಾ ಅವರು ಕೂಡಲೇ ದೆಹಲಿಗೆ ಬರಬೇಕೆಂದು ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ ಸಂಸದೆ ಸುಮಲತಾ ಅವರು ದೆಹಲಿಗೆ ತೆರಳಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.ಅಲ್ಲದೇ ಮಂಡ್ಯವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದ್ದು, ಬೇರೆ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಆಫರ್ ನೀಡಿದ್ದಾರೆ ಎಂದು ತಿಳಿದುಬಂದಿದೆ ಆದರೆ ಈ ನಡುವೆ ಜೆಪಿ ನಡ್ಡಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಮಂಡ್ಯದ ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಒಂದು ಸುದೀರ್ಘವಾದ ಚರ್ಚೆ ನಡೆಯಿತು. ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಜೊತೆ ಮಾತುಕತೆ ಮುಕ್ತಾಯವಾಗಿದೆ. ಮಂಡ್ಯದ ಬಗ್ಗೆ ಇನ್ನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮಂಡ್ಯ ಕ್ಷೇತ್ರದಿಂದಲೇ ಟಿಕೆಟ್ ಕೊಡಲು ನಾನು ಕೇಳಿದ್ದೇನೆ. ಇಂದು ಸಂಜೆ ಸಭೆ ನಡೆಯಲಿದೆ. ಈ ಸಭೆಯ ನಂತರ ನಿರ್ಧಾರವಾಗಲಿದೆ. ಮೋದಿಯವರು ನನಗೆ ಭರವಸೆ ನೀಡಿದ್ದಾರೆ. ನಿಮ್ಮನ್ನ ಮತ್ತು ನಿಮ್ಮ ಕಾರ್ಯಕರ್ತರನ್ನ ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆ ಇಲ್ಲ ಎಂದು ಭರವಸೆ ನೀಡಿದ್ದಾರೆ.
ನನ್ನನ್ನು ಸಂಧಾನ ಮಾಡುವ ಪ್ರಯತ್ನ ಇಂದು ಆಗಿಲ್ಲ. ನಾಳೆ ಮಂಡ್ಯಕ್ಕೆ ಹೋಗಿ ಬೆಂಬಲಿಗರೊಂದಿಗೆ ಮಾತನಾಡುತ್ತೇನೆ. ಕಾರ್ಯಕರ್ತರನ್ನು ಬಿಟ್ಟು ಕೊಟ್ಟು ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದಿದ್ದೇನೆ. ನಿಶ್ಚಿಂತೆಯಾಗಿರಿ ಏನೂ ನಿರ್ಧಾರ ಆಗಿಲ್ಲ ಎಂದು ಜೆ.ಪಿ ನಡ್ಡಾ ಅವರೇ ಹೇಳಿದ್ದಾರೆ.ನಿಮ್ಮಂತಹ ನಾಯಕಿ ಬಿಜೆಪಿ ಪಕ್ಷಕ್ಕೆ ಬೇಕು. ಇಂದು ಮತ್ತೊಂದು ಸಭೆ ನಡೆಯಲಿದ್ದು, ಮಂಡ್ಯ ಬಗ್ಗೆ ಫೈನಲ್ ನಿರ್ಧಾರ ತಿಳಿಸುತ್ತೇವೆ ಎಂದು ನಡ್ಡಾ ಹೇಳಿದ್ದಾರೆ ಎಂದು ಸುಮಲತಾ ತಿಳಿಸಿದ್ದಾರೆ .ನಾನು ಯಾವುದೇ ಕಾರಣಕ್ಕೂ ಬಿಜೆಪಿಯಿಂದ ದೂರ ಹೋಗುವ ಪ್ರಶ್ನೆ ಇಲ್ಲ. ನನ್ನ ಸಂಸತ್ ಅವಧಿ ಮುಕ್ತಾಯದ ನಂತರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದರು.


