ಮಂಗಳೂರು : ಸಹಕಾರ ಕ್ಷೇತ್ರದ ಭೀಷ್ಮ , ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ ಹಾಗೂ 77 ಮಂದಿ ಫಲಾನುಭವಿಗಳಿಗೆ ಸವಲತ್ತುಗಳ ವಿತರಣಾ ಕಾರ್ಯಕ್ರಮ ಪ್ರಧಾನ ಕಚೇರಿಯ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.



ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ , “ಸಹಕಾರಿ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಶ್ಲಾಘನೀಯವಾದುದು. ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ಅವರು ಈ ವೇಳೆಯಲ್ಲೂ ಅದನ್ನು ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಿರುವುದು ಅವರ ಸಮಾಜದ ಮೇಲಿನ ಕಾಳಜಿ ಮತ್ತು ಪ್ರೀತಿಗೆ ಸಾಕ್ಷಿಯಾಗಿದೆ. ಇಂತಹ ರಾಜೇಂದ್ರ ಕುಮಾರ್ ಅವರು ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರಿಗೆ ಸರಿಸಮವಾಗಿ ಬೆಳೆಯಬೇಕು” ಎಂದು ಶುಭ ಹಾರೈಸಿದರು.
ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ಡಾ। ಎಂ. ವೀರಪ್ಪ ಮೊಯಿಲಿ ಅಭಿವಂದನಾ ಭಾಷಣವನ್ನು ಮಾಡಿ , “ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು ಭಾರತ ಕಂಡ ಸಮರ್ಥ ಸಹಕಾರಿ ರತ್ನ ಎಂದರೆ ತಪ್ಪಾಗಲಾರದು. ಅವರು ಸಹಕಾರಿ ಕ್ಷೇತ್ರದ ಧ್ರುವ ನಕ್ಷತ್ರವಾಗಿದ್ದಾರೆ. ಕೃಷಿ ಬದುಕಿನ ರೈತರ ಸಾಮಾಜಿಕ ನ್ಯಾಯದ ರೂವಾರಿ ಅವರಾಗಿದ್ದಾರೆ. ನೂರು ವರ್ಷಗಳ ಕಾಲ ಅವರು ಹೀಗೆಯೇ ಬದುಕಲಿ. ನಮ್ಮ ಜಿಲ್ಲೆಯ ನಮ್ಮ ರಾಜ್ಯ ದೇಶದ ಹೆಸರನ್ನು ಇನ್ನಷ್ಟು ಉತ್ತುಂಗಕ್ಕೇರಿಸಲು ಅವರು ಅರ್ಹರಾಗಿದ್ದಾರೆ. ಬ್ಯಾಂಕ್ ಈ ಮಟ್ಟಕ್ಕೆ ಬೆಳೆದು ನಿಲ್ಲಲು ಅವರ ಪ್ರಾಮಾಣಿಕ ಪ್ರಯತ್ನ ಕಾರಣವಾಗಿದೆ. ಇಂದು ಹಿಮಾಲಯದ ಎತ್ತರಕ್ಕೆ ಬ್ಯಾಂಕ್ ಬೆಳೆದು ನಿಂತಿದೆ” ಎಂದರು.
ಅಭಿವಂದನೆ ಸ್ವೀಕರಿಸಿ ಮಾತಾಡಿದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು, “33 ವರ್ಷಗಳ ಹಿಂದೆ ನಾನು ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟಾಗ ಪರಿಸ್ಥಿತಿ ತೀರಾ ಭಿನ್ನವಾಗಿತ್ತು. ಆದರೆ ಇಂದು ನಿಮ್ಮೆಲ್ಲರ ಸಹಕಾರದಿಂದ ನಮ್ಮ ಜಿಲ್ಲೆಯ ಸಹಕಾರಿ ಕ್ಷೇತ್ರ ಶ್ರೀಮಂತವಾಗಿದೆ. ಎಲ್ಲ ಸಹಕಾರಿ ಬ್ಯಾಂಕ್ ಗಳು ಇಂದು ಸ್ವಂತ ಕಟ್ಟಡ, ಗ್ರಾಹಕರಿಗೆ ಹವಾನಿಯಂತ್ರಿತ ವ್ಯವಸ್ಥೆ ಹೊಂದಿವೆ. ಅತೀ ಹೆಚ್ಚು ರೈತರಿಗೆ ಕೃಷಿ ಸಾಲ ಕೊಟ್ಟ ಜಿಲ್ಲೆ ನಮ್ಮದು. ನಮ್ಮ ಜಿಲ್ಲೆಯಲ್ಲಿ ಶೇ. 95ರಷ್ಟು ಸಂಘಗಳಲ್ಲಿ ಚುನಾವಣೆಯಿಲ್ಲದೆ ಅವಿರೋಧವಾಗಿ ಆಯ್ಕೆ ನಡೆಯುತ್ತಿದೆ. ಇದು ನನ್ನೊಬ್ಬನ ಸಾಧನೆಯಲ್ಲ ಎಲ್ಲ ಸಹಕಾರಿಗಳ ಒಗ್ಗಟ್ಟಿನಿಂದ ಇದು ಸಾಧ್ಯವಾಗಿದೆ. ನಾವು ನವೋದಯ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಅತೀ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುತ್ತೇವೆ. ಎಲ್ಲ ಸಾಲ ಮರುಪಾವತಿಯಾಗುತ್ತಿದೆ. ಇದರಿಂದಾಗಿ ರಾಜ್ಯದ ಹೆಚ್ಚಿನ ಸಕ್ಕರೆ ಕಾರ್ಖಾನೆಗಳಿಗೆ ನಾವು ಸಾಲ ಕೊಡಲು ಶಕ್ತರಾಗಿದ್ದೇವೆ. ಇಂದು ವೀರಪ್ಪ ಮೊಯಿಲಿಯವರು ನನಗೆ ಶುಭ ಹಾರೈಸಿದ್ದು ಅತೀವ ಖುಷಿ ತಂದಿದೆ. ಮುಂದೆಯೂ ನಿಮ್ಮವನಾಗಿ ಜನರ ಸೇವೆ ಮಾಡುತ್ತೇನೆ” ಎಂದರು.
ಇದೇ ಸಂದರ್ಭದಲ್ಲಿ ಅರ್ಹ 77 ಮಂದಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ನಡೆಯಿತು . ಅಭಿವಂದನಾ ಸಮಿತಿಯ ಅಧ್ಯಕ್ಷರಾದ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಅಥಿತಿಗಳನ್ನು ಸ್ವಾಗತಿಸಿದರು.ದೀಕ್ಷಿತಾ ಭಟ್ ದೇವರ ಪ್ರಾರ್ಥನೆ ಮಾಡಿದರು . ನಿತೇಶ್ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ ವೇದವ್ಯಾಸ ಕಾಮತ್ ವಹಿಸಿದರು ಈ ಸಂದರ್ಭದಲ್ಲಿ ನಬಾರ್ಡ್ ಡಿಜಿಎಂ ಕೆ.ಜಗದೀಶ್, ಸಹಕಾರ ಮಾರಾಟ ಮಂಡಲದ ಎಂ.ಡಿ.ಲಿಂಗರಾಜು, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಯಕರ ಶೆಟ್ಟಿ ಇಂದ್ರಾಳಿ, ಕಣಚೂರು ಮೋನು, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಮೇಘರಾಜ್ ಜೈನ್, ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಎಂ. ವಾದಿರಾಜ ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಗೊಟ್ಟು, ಎಸ್.ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ. ಮತ್ತಿತರರು ಉಪಸ್ಥಿತರಿದ್ದರು.


