ಮಂಗಳೂರು : ಕರ್ನಾಟಕಕ್ಕೆ ನೀಡಬೇಕಾದ ಅನುದಾನ ಬಿಡುಗಡೆ ಮಾಡುವಲ್ಲಿ ಕೇಂದ್ರದ ತಾರತಮ್ಯ ಧೋರಣೆ ಖಂಡಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ನಿನ್ನೆ ದೆಹಲಿಯಲ್ಲಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯ ವಿಸ್ತರಣೆ ಇದು. ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಂಗ್ ಎನ್ ಎಸ್ ಯು ಐ ನ ದಕ್ಷಿಣ ಕನ್ನಡ ಘಟಕ ಇಂದು ಸ್ಥಳೀಯ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನೆಯೆದುರು ಪ್ರತಿಭಟನೆ ನಡೆಸಿ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನವನ್ನೂ ಮಾಡಿತು.
ರಾಷ್ಟ್ರಮಟ್ಟದಲ್ಲಿ ಉತ್ತಮ ಸಂಸದನೆಂಬ ಹೆಸರು ಪಡೆದಿರುವ ಸಂಸದರು, ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿರುವ ಕೊಡುಗೆ ಏನು? ಜಿಲ್ಲೆಯಲ್ಲಿ ಅನೇಕ ಹೆಸರಾಂತ ಕಾಲೇಜುಗಳಿವೆ, ಆದರೆ ಸಂಸದರಿಂದ ಉದ್ಯೋಗ ಸೃಷ್ಟಿ ಮಾಡಲಾಗಿಲ್ಲ,ರಾಜ್ಯ ಸರ್ಕಾರದ ತೆರಿಗೆ ಹಣವನ್ನು ಕೇಂದ್ರದ ವಾಪಸ್ಸು ಕೊಡಿಸುವುದು ಇವರಿಗೆ ಸಾಧ್ಯವಾಗುತ್ತಿಲ್ಲ, ಇಂಥ ಸಂಸದರು ನಮಗೆ ಬೇಕಿಲ್ಲ, ಎಂದು ಹೇಳುತ್ತಾ ಯುವಕ ಸಂಸದ ನಳಿನ್ ಕುಮಾರ್ ಕಟೀಲ್ ಗೆ ಧಿಕ್ಕಾರ, ಬಿಜೆಪಿಗೆ ಧಿಕ್ಕಾರ ಅಂತ ತನ್ನ ಸಹಪಾಠಿಗಳೊಂದಿಗೆ ಘೋಷಣೆ ಕೂಗಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಸದರ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. 20ಕ್ಕೂ ಹೆಚ್ಚು ಎನ್‌ಎಸ್‌ಯುಐ ಕಾರ್ಯಕರ್ತರು ಸಂಸದರ ನಿವಾಸಕ್ಕೆ ನುಗ್ಗಿ ಪ್ರತಿಭಟನೆಗೆ ಯತ್ನಿಸಿದರು. ನಂತರ ಪೊಲೀಸರು ಪ್ರತಿಭಟನಾಕಾರರ ಯತ್ನವನ್ನು ವಿಫಲಗೊಳಿಸಿದರು ಮತ್ತು ಕೆಲವರನ್ನು ಬಂಧಿಸಿದರು.


