ಮಂಗಳೂರು ; ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರ ಪ್ಯಾಸಿಕ್ಯೂಷನ್ ಅನುಮತಿ ವಿಚಾರದಲ್ಲಿ ರಾಜ್ಯಪಾಲರ ನಡೆ ಖಂಡಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿದ್ದು ಬಸ್ಸಿಗೆ ಕಲ್ಲು ತೂರಾಟ ನಡೆಸಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶಹೊರಹಾಕಿದ್ದಾರೆ.


ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ವಿಚಾರವಾಗಿ ಇಂದು ಕರ್ನಾಟಕದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ರೋಡಿಗಿಳಿದಿದ್ದಾರೆ. ಮಂಗಳೂರು ಪಾಲಿಕೆ ಕಚೇರಿ ಮುಂಭಾಗ ರಸ್ತೆಯಲ್ಲಿ ಪ್ರತಿಭಟನೆ ವೇಳೆ ಬಸ್ಗೆ ಕಲ್ಲು ತೂರಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರಪಾಲಿಕೆಯ ನಾಮನಿರ್ದೇಶಿತ ಸದಸ್ಯ ಕಿಶೋರ್ ಶೆಟ್ಟಿ ಹಾಗೂ ಕಾರ್ಯಕರ್ತರಾದ ಶಾಹುಲ್ ಹಮೀದ್, ಅನ್ವರ್ ಬಂಧಿತರು. ಪ್ರತಿಭಟನೆ ವೇಳೆ ಖಾಸಗಿ ಸಿಟಿ ಬಸ್ ತಡೆದು ಗೂಂಡಾಗಿರಿ ನಡೆಸಿದ್ದರು. ಈ ವೇಳೆ ಪೊಲೀಸರ ಎದುರೇ ಬಸ್ನ ಮುಂದಿನ ಗಾಜಿಗೆ ಕಲ್ಲುತೂರಿದ್ದಾರೆ. ಕಾಲಿನಿಂದ ಒದ್ದು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಸದ್ಯ ಕಲ್ಲು ತೂರಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಬೃಹತ್ ಕಾಲ್ನಡಿಗೆ ಜಾಥ ಆರಂಭವಾಗಿದ್ದು ಮಂಗಳೂರು ನಗರ ಸೇರಿ ಪುತ್ತೂರು, ಸುಳ್ಯ, ಬೆಳ್ತಂಗಡಿಯ ಕಾರ್ಯಕರ್ತರು ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ನಾರಾಯಣ ಗುರು ಸರ್ಕಲ್ ಬಳಿ ಕಾರ್ಯಕರ್ತರು ಜಮಾಯಿಸಿದ್ದು ಎಂಎಲ್ ಸಿ ಐವನ್ ಡಿಸೋಜಾ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸೇರಿ ಹಲವು ಪ್ರಮುಖ ನಾಯಕರು ಭಾಗಿಯಾಗಿದ್ದರು.


