ಮಂಗಳೂರು : ಕಂಕನಾಡಿ ಠಾಣಾ ವ್ಯಾಪ್ತಿಯ ಅಳಪೆ ಪಡೀಲ್ ಅರಣ್ಯ ಇಲಾಖೆಯ ಸಸ್ಯವನದಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸಗಾರರ ಎರಡೂವರೆ ವರ್ಷದ ಹೆಣ್ಣು ಮಗು ದಿನಾಂಕ 31.09.2024 ರಂದು ಸಂಜೆ 4.30 ಗಂಟೆಗೆ ಕಾಣೆಯಾಗಿದ್ದು, ಎಲ್ಲ ಕಡೆ ಹುಡುಕಾಡಿ ಸಂಜೆ 7.30 ಗಂಟೆಗೆ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಕಂಕನಾಡಿ ನಗರ ಪೊಲೀಸರು ಮೇಲಧಿಕಾರಿಗಳಿಗೆ ಮಾಹಿತಿ ಎಲ್ಲ ಕಡೆ ಮಾಹಿತಿ ನೀಡಿ, ರೈಲ್ವೆ ಜಂಕ್ಷನ್ ಗೆ ಭೇಟಿ ನೀಡಿ ಸಿಸಿಟಿವಿ ಫೂಟೇಜ್ ಆಧಾರದಲ್ಲಿ ವೃದ್ಧನೋರ್ವ ಮಗುವೊಂದನ್ನು ಕರೆದುಕೊಂಡು ಹೋಗುತ್ತಿರುವುದನ್ನು ಗಮನಿಸಿ ಕೇರಳ ಕಡೆಗೆ ಹೋಗುತ್ತಿದ್ದ ರೈಲಿನ ಬಗ್ಗೆ ಕಾಸರಗೋಡು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ ಮಗುವಿನೊಂದಿಗೆ ವೃದ್ಧನನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.
ಮಗುವನ್ನು ಅಪಹರಿಸಿದ ಆರೋಪಿ ಅನೀಶ್ ಕುಮಾರ್(೪೯) ಎರ್ನಾಕುಲಂ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ. ಮನೆಯಲ್ಲಿ ಗಲಾಟೆ ಮಾಡಿಕೊಂಡು ಮುಂಬೈ ಗೆ ತಾಯಿ ಬಳಿ ಹೋಗಿ ವಾಪಸ್ಸು ಮಂಗಳೂರು ರೈಲಿನಲ್ಲಿ ಬಂದು, ಸಸ್ಯವನ ಮುಂಭಾಗದ ರಸ್ತೆಯಲ್ಲಿ ಬರುತ್ತಿರುವಾಗ ರಸ್ತೆಯಲ್ಲಿ ಆಟವಾಡಿಕೊಂಡಿದ್ದ ಮಗುವನ್ನು ನೋಡಿದ್ದು, ತನಗೂ 3 ಗಂಡು ಮಕ್ಕಳಿದ್ದು, ಹೆಣ್ಣು ಮಗು ಸಾಕಬೇಕೆಂಬ ಉದ್ದೇಶದಿಂದ ಕರೆದುಕೊಂಡು ಹೋಗಿರುವುದಾಗಿ ತನಿಖೆಯಲ್ಲಿ ತಿಳಿದಿದೆ. ಆರೋಪಿಯನ್ನು ಬಳಿಕ ದಸ್ತಗಿರಿ ಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನದಲಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಸಿದ್ದಾರ್ಥ್ ಗೋಯೆಲ್, ಡಿಸಿಪಿ (ಅಪರಾಧ ಮತ್ತು ಸಂಚಾರ) ದಿನೇಶ್ ಕುಮಾರ್ ಮತ್ತು ಎಸಿಪಿ (ದಕ್ಷಿಣ ವಿಭಾಗ) ಧನ್ಯಾ ನಾಯಕ್ ಅವರ ನಿರ್ದೇಶನದಂತೆ. ಕಂಕನಾಡಿ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಟಿ ಡಿ ನಾಗರಾಜ್ ನೇತೃತ್ವದ ತಂಡದಲ್ಲಿ ಪಿಎಸ್ಐ ಶಿವಕುಮಾರ್, ಎಎಸ್ಐ ಅಶೋಕ್, ಅಧಿಕಾರಿಗಳಾದ ಆಶಿತ್ ಡಿಸೋಜಾ, ಕುಶಾಲ್ ಹೆಗ್ಡೆ, ರಾಘವೇಂದ್ರ, ಪೂಜಾ ಅವರು ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


