Saturday, March 21, 2026
Flats for sale
Homeಜಿಲ್ಲೆಮಂಗಳೂರು : ಮಾ. 24ರಿಂದ 28 ರ ವರೆಗೆ ‌ಮಂಗಳೂರಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪವರ್‌ಲಿಫ್ಟಿಂಗ್...

ಮಂಗಳೂರು : ಮಾ. 24ರಿಂದ 28 ರ ವರೆಗೆ ‌ಮಂಗಳೂರಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪವರ್‌ಲಿಫ್ಟಿಂಗ್ ಮಹಾಸಮರಕ್ಕೆ ವೇದಿಕೆ ಸಜ್ಜು.!

ಮಂಗಳೂರು : ಕರಾವಳಿಯ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಮಂಗಳೂರು ಸಜ್ಜಾಗಿದೆ. ಕರ್ನಾಟಕ ಪವರ್‌ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಮತ್ತು ಕಶಾರ್ಪ್ ಫಿಟ್ನೆಸ್ ವತಿಯಿಂದ ʻರಾಷ್ಟ್ರ ಮಟ್ಟದ ಸೀನಿಯರ್ ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ 2026′ ಮಾರ್ಚ್ 24 ರಿಂದ 28 ರವರೆಗೆ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಸತೀಶ್ ಕುಮಾರ್ ಕುದ್ರೋಳಿ ತಿಳಿಸಿದರು.

ನಗರದ ಕಶಾರ್ಪ್ ಫಿಟ್ನೆಸ್ ಸೆಂಟರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರೀಡಾಕೂಟದ ಮಹತ್ವ ಮತ್ತು ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು.

ಐದು ದಿನಗಳ ಕಾಲ ನಡೆಯುವ ಈ ಬೃಹತ್ ಕ್ರೀಡಾಕೂಟದಲ್ಲಿ ದೇಶದ ವಿವಿಧ ರಾಜ್ಯಗಳಿಂದ 300ಕ್ಕೂ ಹೆಚ್ಚು ನುರಿತ ಪುರುಷ ಮತ್ತು ಮಹಿಳಾ ಪವರ್‌ಲಿಫ್ಟರ್‌ಗಳು ಪಾಲ್ಗೊಳ್ಳಲಿದ್ದಾರೆ. ಸ್ಕ್ವಾಟ್, ಬೆಂಚ್ ಪ್ರೆಸ್ ಮತ್ತು ಡೆಡ್‌ಲಿಫ್ಟ್ ವಿಭಾಗಗಳಲ್ಲಿ ಕ್ರೀಡಾಪಟುಗಳು ತಮ್ಮ ಶಕ್ತಿ ಹಾಗೂ ತಾಂತ್ರಿಕ ಕೌಶಲ್ಯವನ್ನು ಪ್ರದರ್ಶಿಸಲಿದ್ದಾರೆ. ಮಂಗಳೂರಿನಲ್ಲಿ ಇಂತಹ ಉನ್ನತ ಮಟ್ಟದ ಸ್ಪರ್ಧೆ ನಡೆಯುತ್ತಿರುವುದು ಜಿಲ್ಲೆಯ ಕ್ರೀಡಾ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ ಎಂದವರು ತಿಳಿಸಿದರು.

ಈ ಬಾರಿಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ವಿಶೇಷ ಪ್ರಾಮುಖ್ಯತೆ ಇದೆ. ಇಲ್ಲಿ ಚಿನ್ನದ ಪದಕ ಗೆಲ್ಲುವ ಕ್ರೀಡಾಪಟುಗಳು ಜೂನ್ ತಿಂಗಳಲ್ಲಿ ಲಿಥುವೇನಿಯಾದಲ್ಲಿ ನಡೆಯಲಿರುವ ʻವಿಶ್ವ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್’ನಲ್ಲಿ ಭಾರತವನ್ನು ಪ್ರತಿನಿಧಿಸುವ ಸುವರ್ಣ ಅವಕಾಶ ಪಡೆಯಲಿದ್ದಾರೆ. ಈ ಕಾರಣದಿಂದಾಗಿ ದೇಶದ ಶ್ರೇಷ್ಠ ಕ್ರೀಡಾಪಟುಗಳ ನಡುವೆ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ.

ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಪ್ರದೀಪ್ ಕುಮಾರ್ ಆಚಾರ್ಯ ಮಾತನಾಡಿ, ಮಾರ್ಚ್ 24ರಂದು ಬೆಳಿಗ್ಗೆ 10 ಗಂಟೆಗೆ ಚಾಂಪಿಯನ್‌ಶಿಪ್‌ನ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮಂಗಳೂರು ಜಿಲ್ಲಾಧಿಕಾರಿಗಳು ಮುಖ್ಯ ಅತಿಥಿಯಾಗಿ ಆಗಮಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು, ಕ್ರೀಡಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಪ್ರಾಯೋಜಕರು ಉಪಸ್ಥಿತರಿರಲಿದ್ದಾರೆ. ಕ್ರೀಡಾಕೂಟವನ್ನು ಅಂತಾರಾಷ್ಟ್ರೀಯ ಮಾನದಂಡಗಳನ್ವಯ ಆಯೋಜಿಸಲಾಗುತ್ತಿದ್ದು, ಅತ್ಯಾಧುನಿಕ ಸ್ಪರ್ಧಾ ಸಾಧನಗಳು, ಅನುಭವೀ ತಾಂತ್ರಿಕ ಅಧಿಕಾರಿಗಳು ಮತ್ತು ಕಟ್ಟುನಿಟ್ಟಿನ ಡೋಪಿಂಗ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮೆಸ್ಕಾಂ ಅಧಿಕಾರಿಗಳಾದ ಎ. ಉಮೇಶ್ ಗಟ್ಟಿ ಮತ್ತು ಮಧುಚಂದ್ರ ಎಂ.ಎಂ., ಹಾಗೂ ಕರ್ನಾಟಕ ಪವರ್‌ಲಿಫ್ಟಿಂಗ್ ಅಸೋಸಿಯೇಶನ್ ಕೋಶಾಧಿಕಾರಿ ಜಯರಾಮ್ ಶೆಟ್ಟಿಗಾರ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular