Monday, November 23, 2026
Homeಜಿಲ್ಲೆಮಂಗಳೂರು : ಮಂಗಳೂರಿನಲ್ಲಿ ಮಧ್ಯರಾತ್ರಿ ವ್ಯಾಪಾರಕ್ಕೆ ಬ್ರೇಕ್: ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ಅಂಗಡಿ, ಹೋಟೆಲ್...

ಮಂಗಳೂರು : ಮಂಗಳೂರಿನಲ್ಲಿ ಮಧ್ಯರಾತ್ರಿ ವ್ಯಾಪಾರಕ್ಕೆ ಬ್ರೇಕ್: ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ಅಂಗಡಿ, ಹೋಟೆಲ್ ಬಂದ್..!

ಮಂಗಳೂರು : ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ರಾತ್ರಿ ವೇಳೆ ವ್ಯಾಪಾರ ವಹಿವಾಟುಗಳಿಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸಮಯದ ನಿರ್ಬಂಧ ವಿಧಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಆಯುಕ್ತರು ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಅವರು ನವೆಂಬರ್ 23ರಂದು ಈ ಆದೇಶ ಹೊರಡಿಸಿದ್ದಾರೆ.

ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ಬಂದ್

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ವ್ಯಾಪಾರಿಕ ಸಂಸ್ಥೆಗಳು, ಅಂಗಡಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಟೀ ಸ್ಟಾಲ್‌ಗಳು, ಪಾನ್ ಅಂಗಡಿಗಳು ಸೇರಿದಂತೆ ಇತರ ವಾಣಿಜ್ಯ ಚಟುವಟಿಕೆಗಳನ್ನು ಪ್ರತಿದಿನ ರಾತ್ರಿ 11.45ರಿಂದ ಮರುದಿನ ಬೆಳಗ್ಗೆ 5.30ರವರೆಗೆ ಸ್ಥಗಿತಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ನಿರ್ಬಂಧಕ್ಕೆ ಕಾರಣವೇನು?

ರಾತ್ರಿ ವೇಳೆ ಅನಗತ್ಯ ಜನರ ಗುಂಪುಗೂಡುವಿಕೆ, ಅನುಮಾನಾಸ್ಪದ ವ್ಯಕ್ತಿಗಳ ಓಡಾಟ, ಮಾದಕ ವ್ಯಸನ ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವುದು ಈ ಆದೇಶದ ಪ್ರಮುಖ ಉದ್ದೇಶವಾಗಿದೆ.

ಅಲ್ಲದೆ, ವ್ಯಾಪಾರ ಕೇಂದ್ರಗಳ ಬಳಿ ವಾಹನ ನಿಲುಗಡೆ, ಜೋರಾದ ಶಬ್ದ, ಗದ್ದಲ ಹಾಗೂ ರಸ್ತೆಗಳಲ್ಲಿ ಜನರ ಗುಂಪುಗೂಡುವಿಕೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಆಸ್ಪತ್ರೆ, ಮೆಡಿಕಲ್‌ಗಳಿಗೆ ವಿನಾಯಿತಿ

ಆಸ್ಪತ್ರೆಗಳು, ಔಷಧ ಅಂಗಡಿಗಳು, ತುರ್ತು ಸೇವೆಗಳು ಹಾಗೂ ಅಗತ್ಯ ಸಾರ್ವಜನಿಕ ಉಪಯೋಗಿತಾ ಸೇವೆಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ.

ಅದೇ ರೀತಿ CL-4, CL-6(a), CL-7 ಪರವಾನಗಿ ಹೊಂದಿರುವ ಸಂಸ್ಥೆಗಳು ತಮ್ಮ ಲೈಸೆನ್ಸ್‌ನಲ್ಲಿ ನಿಗದಿಪಡಿಸಿರುವ ನಿಯಮಗಳಂತೆ ಕಾರ್ಯನಿರ್ವಹಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ತಕ್ಷಣದಿಂದ ಜಾರಿ

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 31(W) ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಈ ಆದೇಶ ತಕ್ಷಣದಿಂದ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಮುಂದುವರಿಯಲಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular