Friday, March 13, 2026
Flats for sale
Homeಜಿಲ್ಲೆಮಂಗಳೂರು : ನೇತ್ರಾವತಿ ಸೇತುವೆಯ ಭಾಗದಲ್ಲಿ ನಿಯಮ ಉಲ್ಲಂಘಿಸಿ 2.1 ಕಿ.ಮೀ ಉದ್ದದ ವಾಕಿಂಗ್ ಹಾಗೂ...

ಮಂಗಳೂರು : ನೇತ್ರಾವತಿ ಸೇತುವೆಯ ಭಾಗದಲ್ಲಿ ನಿಯಮ ಉಲ್ಲಂಘಿಸಿ 2.1 ಕಿ.ಮೀ ಉದ್ದದ ವಾಕಿಂಗ್ ಹಾಗೂ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಾಣ,ಸ್ಥಳೀಯರ ಆಕ್ರೋಶ.

ಮಂಗಳೂರು : ನೇತ್ರಾವತಿ ನದಿಯೆಂದರೆ ಮಂಗಳೂರಿಗರಿಗೆ ಜೀವನದಿ ಅಂತಾನೆ ಹೇಳಬಹುದು ಆದರೆ ನಗರದ ಜಪ್ಪು ಬಳಿಯ ನೇತ್ರಾವತಿ ಸೇತುವೆಯ ಭಾಗದಿಂದ ಬೋಳಾರ ಭಾಗದವರೆಗೆ ನೇತ್ರಾವತಿ ನದಿ ತಟದಲ್ಲಿ ವಾಕಿಂಗ್, ಸೈಕ್ಲಿಂಗ್ ಟ್ರ್ಯಾಕ್ ಯೋಜನೆಗೆ ಸುಮಾರು 70 ಕೋಟಿ ವ್ಯಯಿಸಿದ್ದು ನದಿ ಭಾಗದ ಖಾಸಗಿ ಜಾಗದಲ್ಲೂ ನಿಯಮ ಉಲ್ಲಂಘಿಸಿ ಸರ್ಕಾರಿ ಪ್ರಾಜೆಕ್ಟ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಕಡಲನಗರಿ ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ನಡೆಯುತ್ತಿದೆ. ಸ್ಮಾರ್ಟ್ ಸಿಟಿಯ ಕಾಮಗಾರಿಗಳಲ್ಲಿ ಒಂದಾಗಿರುವ ನೇತ್ರಾವತಿ ರಿವರ್ ಫ್ರಂಟ್ ಯೋಜನೆಗೆ ಹಲವು ಅಪಸ್ವರಗಳು ಕೇಳಿಬಂದಿದ್ದು ನದಿ ಒತ್ತುವರಿ ಮಾಡಿ ನಿಯಮ ಉಲ್ಲಂಘನೆ ಮಾಡುತ್ತಿರುವ ಜೊತೆ ಜನರ ತೆರಿಗೆ ಹಣವನ್ನು ಅಧಿಕಾರಿಗಳು ಪೋಲು ಮಾಡುತ್ತಿರುವ ಆರೋಪ ಕೇಳಿಬಂದಿದೆ.ನದಿ, ಸಮುದ್ರಗಳು ನೈಸರ್ಗಿಕವಾಗಿ ಇದ್ದರಷ್ಟೇ ಚಂದ. ಆದ್ರೆ ಕಡಲನಗರಿ ಮಂಗಳೂರಿನಲ್ಲಿ ಸರ್ಕಾರಿ ಯೋಜನೆ ಹೆಸರಲ್ಲಿ ನದಿ ಒತ್ತುವರಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಪರಿಸರ ನಾಶದ ಜೊತೆ ನಮ್ಮ ತೆರಿಗೆ ಹಣ ಪೋಲಾಗುತ್ತಿದೆ ಎಂದು ಈ ಬಗ್ಗೆ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ.

ಸುಮಾರು 2.1 ಕಿ.ಮೀ ಉದ್ದದಲ್ಲಿ ವಾಕಿಂಗ್ ಹಾಗೂ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತಿದ್ದು ಇಲ್ಲಿ ಟ್ರ್ಯಾಕ್ ನಿರ್ಮಾಣಕ್ಕಾಗಿ ಖಾಸಗಿ ಜಮೀನು ಇರುವ ಭಾಗದಲ್ಲಿ ನದಿಗೆ ಮಣ್ಣು ಹಾಕಿ ತಡೆಗೋಡೆ ನಿರ್ಮಿಸಿ ಸಿ.ಆರ್.ಝೆಡ್ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದರ ಜೊತೆ ಈ ಯೋಜನೆಯ ಸಾಧಕ-ಭಾದಕಗಳ ಬಗ್ಗೆ ಸ್ಥಳೀಯ ಮೀನುಗಾರರ ಜೊತೆ ಚರ್ಚಿಸಿಲ್ಲ ಎಂದು ಆರೋಪಿಸಲಾಗಿದೆ.

ಈ ಯೋಜನೆಗೆ ಆರಂಭಕ್ಕೆ ಮೊದಲು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಇರುವುದು ತಿಳಿದಿದೆ, ಹೀಗಿದ್ದರೂ ಮರಗಳನ್ನು ಕಡಿದು ಪರಿಸರ ನಾಶ ಮಾಡಲಾಗಿದೆ ಎಂದು ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.ಇನ್ನು ಈ ಯೋಜನೆಗೆ ಸುಮಾರು 70 ಕೋಟಿ ವ್ಯಯಿಸಲಾಗುತ್ತಿದೆ. ಆದ್ರೆ ಇದಕ್ಕೆ ಇಷ್ಟು ಮೊತ್ತ ಬೇಕೆ ಎಂದು ರಾಜ್ಯ ನಗರಾಭಿವೃದ್ದಿ ಸಚಿವ ಬಿ.ಎಸ್.ಸುರೇಶ್ ಅವರೇ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಈ ಯೋಜನೆಯಿಂದ ಸ್ಥಳೀಯ ಮೀನುಗಾರರಿಗೂ ತೊಂದರೆಯಾಗಿದ್ದು ಮೀನುಗಾರರು ಯೋಜನೆಯನ್ನು ವಿರೋಧಿಸಿದ್ದಾರೆ. ಸ್ಥಳೀಯ ನಿವಾಸಿಗಳ ಹಲವು ಬೋಟುಗಳಿದ್ದು ತಡೆಗೋಡೆ ಕಟ್ಟುವುದರಿಂದ ಬೋಟ್ ಎಳೆದು ಮೀನು ಅನ್‌ಲೋಡ್ ಮಾಡಲು ಸಾಧ್ಯವಿಲ್ಲ ಎಂದು ದೂರಿದ್ದಾರೆ. ಒಟ್ಟಿನಲ್ಲಿ ಜನರ ತೆರಿಗೆ ಹಣದಲ್ಲಿ ಜನರಿಗೆ ಉಪಯೋಗ ಆಗುವ ಯೋಜನೆ ಬರಬೇಕೆ ಹೊರತು ಅಧಿಕಾರಿಗಳು, ಜನಪ್ರತಿನಿಧಿಗಳ ಕಿಸೆ ತುಂಬಿಸಿಕೊಳ್ಳುವ ಯೋಜನೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular