Saturday, January 17, 2026
Flats for sale
Homeಜಿಲ್ಲೆಮಂಗಳೂರು : ಡಿಸೆಂಬರ್ 20 ರಿಂದ ಜನವರಿ 31 ವರೆಗೆ ಮನರಂಜನಾ ಹಬ್ಬ ಕರಾವಳಿ ಉತ್ಸವಕ್ಕೆ...

ಮಂಗಳೂರು : ಡಿಸೆಂಬರ್ 20 ರಿಂದ ಜನವರಿ 31 ವರೆಗೆ ಮನರಂಜನಾ ಹಬ್ಬ ಕರಾವಳಿ ಉತ್ಸವಕ್ಕೆ ವೇದಿಕೆ ಸಜ್ಜು.

ಮಂಗಳೂರು : ಮನರಂಜನಾ ಹಬ್ಬ ಕರಾವಳಿ ಉತ್ಸವಕ್ಕೆ ಕಡಲ ನಗರಿ ಮಂಗಳೂರು ಸಜ್ಜಾಗುತ್ತಿದೆ. ವಿಶ್ವದ ಪ್ರಖ್ಯಾತ ಕಲಾವಿದರ ಕೂಡುವಿಕೆಯಿಂದ ನಡೆಯುವ ಈ ಉತ್ಸವಕ್ಕೆ ಹಿರಿಯರಿಂದ ಕಿರಿಯರವರೆಗೆ ತಲೆಬಾಗದವರೇ ಇಲ್ಲ. ಮಂಗಳೂರಿನ ಜನತೆಯು ಅತೀ ಉತ್ಸಾಹದಿಂದ ಜಾತ್ರೆಯಂತೆ ಸೇರುವ ಮನರಂಜನಾ ಉತ್ಸವ ಇದಾಗಿದ್ದು, ಪ್ರತೀ ವರ್ಷದಂತೆ ಈ ವರ್ಷವೂ ಕೂಡ ವೈವಿಧ್ಯಮಯವಾದ ವಸ್ತು ಪ್ರದರ್ಶನ, ಆಹಾರೋತ್ಸವ, ಕ್ರೀಡೆ ಹಾಗೂ ಸಾಂಸ್ಕೃತಿಕ, ಮನರಂಜನೆಯನ್ನು ನೀಡುವುದರೊಂದಿಗೆ ಜನರನ್ನು ಆಕರ್ಷಿಸುವ ದೃಷ್ಟಿಯಿಂದ ಮಂಗಳೂರಿನ ಜನತೆಗೆ ಹಬ್ಬದ ಸಿಹಿಯನ್ನು ಹಂಚಲು ಜಿಲ್ಲಾಡಳಿತ ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

ಕರಾವಳಿ ಉತ್ಸವ ಡಿಸೆಂಬರ್ 20 ರಿಂದ ಪ್ರಾರಂಭವಾಗಲಿದ್ದು, ಜನವರಿ 31 ವರೆಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಕರ್ಷಕ ಸಾಂಸ್ಕೃತಿಕ ಮತ್ತು ಸಾಹಸಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸಿದ ಭಾರತೀಯ ಕಲಾವಿದರಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಮನರಂಜನಾ ಪ್ರದರ್ಶನವನ್ನು ಆಯೋಜಿಸಲಾಗಿದೆ ಹಾಗೂ ಜಿಲ್ಲೆಯ ಕಡಲ ತೀರಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು. ಜಿಲ್ಲೆಯ ಬೀಚ್‌ಗಳಲ್ಲಿ ಕರಾವಳಿ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಕದ್ರಿ ಪಾರ್ಕ್‌ನಲ್ಲಿ ಕಲಾ ಪರ್ಬ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ, ಸ್ವೀಟ್ ಪುಡ್ ಫೆಸ್ಟಿವಲ್ ಹಾಗೂ ವಿವಿಧ ಜಾತಿಯ ಶ್ವಾನಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಮಂಗಳೂರು ನಗರದಲ್ಲಿ ಚಲನಚಿತ್ರ ಉತ್ಸವ ನಡೆಯಲಿದ್ದು ನೆಹರು ಮೈದಾನದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಕ್ರೀಡಾ ಸ್ಪರ್ಧೆ ನಡೆಯಲಿದೆ. ಪಿಳಿಕುಳ ಉದ್ಯಾನವನದಲ್ಲಿಯೂ ಗಾಲ್ಫ್ ಪಂದ್ಯಾವಳಿ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರು ನಗರದ ಹಾಗೂ ಕಡಲ ತೀರದ ಸೊಬಗನ್ನು ಆನಂದಿಸಲು ಅನುಕೂಲವಾಗುವಂತೆ ಸುಲ್ತಾನ್ ಬತ್ತೇರಿ ಹಾಗೂ ಪಣಂಬೂರಿನಲ್ಲಿ ಹೆಲಿಕಾಪ್ಟರ್ ಸಂಚಾರ ಕೂಡ ಆಯೋಜಿಸಲಾಗಿದೆ ಎಂದರು.

ತಣ್ಣೀರು ಬಾವಿ ಬೀಚ್‌ನಲ್ಲಿ ಮುಸ್ಸಂಜೆಯ ಸಮಯದಲ್ಲಿ ಕಡಲ ತೀರಕ್ಕೆ ವಾಯುವಿಹಾರಕ್ಕೆಂದು ಹೋಗುವ ಜನತೆಗೆ ಕಡಲ ತೀರದಲ್ಲಿ ಮನಸ್ಸಿಗೆ ಮುದ ನೀಡುವಂತೆ ಮ್ಯೂಸಿಕ್ ಫೆಸ್ಟಿವಲ್ (ಸಂಗೀತ ಉತ್ಸವ) ನ್ನು ಆಯೋಜಿಸಲಾಗಿದ್ದು ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಅತ್ಯಂತ ಉತ್ಸಾಹದಿಂದ ಕುಟುಂಬ ಸಮೇತರಾಗಿ ಹಾಗೂ ಸ್ನೇಹಿತರೊಂದಿಗೆ ಭಾಗವಹಿಸಿ. ಕರಾವಳಿ ಉತ್ಸವವನ್ನು ಯಶಸ್ವೀಗೊಳಿಸಲು ಜಿಲ್ಲಾಡಳಿತದ ಪರವಾಗಿ ವಿನಂತಿಸಿದ್ದಾರೆ.

ವೈವಿಧ್ಯಮಯವಾದ ವಸ್ತು ಪ್ರದರ್ಶನ, ಆಹಾರೋತ್ಸವ, ಕರಾವಳಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮನರಂಜನಾ ಕಾರ್ಯಕ್ರಮಗಳು ಕರಾವಳಿ ಜನತೆಯ ಒತ್ತಡದ ಜೀವನಕ್ಕೆ ವಿರಾಮ ನೀಡುವುದರೊಂದಿಗೆ ಖುಷಿ ಇಮ್ಮಡಿಗೊಳಿಸುವುದರಲ್ಲಿ ಅಚ್ಚರಿಯೇನಿಲ್ಲ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಆಚರಣೆಯನ್ನು ಸವಿಯಲು ಕರಾವಳಿ ಉತ್ಸವವು ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಪ್ರಮುಖ ವೇದಿಕೆಯಾಗಲಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular