Tuesday, February 3, 2026
Flats for sale
Homeಜಿಲ್ಲೆಮಂಗಳೂರು : ಜ.9 ರಿಂದ 11ರ ವರೆಗೆ ಕದ್ರಿ ಪಾರ್ಕ್ ನಲ್ಲಿ "ಕಲಾ ಪರ್ಬ" ಚಿತ್ರ-...

ಮಂಗಳೂರು : ಜ.9 ರಿಂದ 11ರ ವರೆಗೆ ಕದ್ರಿ ಪಾರ್ಕ್ ನಲ್ಲಿ “ಕಲಾ ಪರ್ಬ” ಚಿತ್ರ- ಶಿಲ್ಪ- ಸಾಂಸ್ಕೃತಿಕ ಮೇಳ.

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಕರಾವಳಿ ಉತ್ಸವ ಪ್ರಯುಕ್ತ ಮಂಗಳೂರಿನ ಶರಧಿ ಪ್ರತಿಷ್ಠಾನ ಆಯೋಜಿಸುವ,ಅಸ್ತ್ರ ಗೋಲ್ಡ್ & ಡೈಮಂಡ್ಸ್ ಸಹಕಾರದೊಂದಿಗೆ “ಕಲಾ ಪರ್ಬ” ಚಿತ್ರ- ಶಿಲ್ಪ- ಸಾಂಸ್ಕೃತಿಕ ಮೇಳವು ಕದ್ರಿ ಪಾರ್ಕ್ ನಲ್ಲಿ ಜ.9ರಿಂದ 11ರತನಕ ನಡೆಯಲಿದೆ ಎಂದು ಚಿತ್ರಕಲಾ ಚಾವಡಿಯ ಕಾರ್ಯದರ್ಶಿ ಎಸ್.ಎಂ.ಶಿವಪ್ರಕಾಶ್ ತಿಳಿಸಿದ್ದಾರೆ.

ಇಂದು ಕದ್ರಿ ಪಾರ್ಕ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ 120 ಮಳಿಗೆಗಳಲ್ಲಿ ರಾಜ್ಯಾದ್ಯಂತ ಕಲಾವಿದರ ಸಾವಿರಾರು ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮಕ್ಕಳಿಗಾಗಿ ಚಿತ್ರ ಕಲಾಸ್ಪರ್ಧೆ ನಡೆಯಲಿದೆ. ಕಲಾವಿದರಿಗೆ ಉತ್ತೇಜನ ಸಿಗಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಉತ್ಸವದಲ್ಲಿ ದೇಶದ 120ಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳಲಿದ್ದು 5,000ಕ್ಕೂ ಅಧಿಕ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ ಎಂದು ಹೇಳಿದ್ದಾರೆ.

ಜ.9ರಂದು ಸಂಜೆ 5.30ಕ್ಕೆ ಕಲಾ ಪರ್ಬ ಉದ್ಘಾಟನೆ, ಮಳಿಗೆಗಳ ಉದ್ಘಾಟನೆ ಹಾಗೂ ಶಿಲ್ಪಕಲಾ ಮಳಿಗೆಗಳ ಉದ್ಘಾಟನೆ, ಭರತನಾಟ್ಯ ನಡೆಯಲಿದೆ. ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ಮೊದಲಾದವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜ.10 ಮತ್ತು 11ರಂದು ಬೆಳಗ್ಗೆ 9ರಿಂದ ರಾತ್ರಿ 9.30ರವರಗೆ ‘ಕಲಾಪರ್ಬ‘ ನಡೆಯಲಿದ್ದು ಕಲಾಪರ್ಬದ ಪ್ರಯುಕ್ತ ಜ.10ರಂದು ಬೆಳಗ್ಗೆ 11ರಿಂದ ಚಿತ್ರಕಲಾ ಸಂವಾದ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಮೇಳ, ಕೊಳಲು ವಾದನ, ಸಾಧಕ ಕಲಾವಿದರಿಗೆ ಸನ್ಮಾನ, ಸಾನಿಧ್ಯ ವಿಶೇಷ ಮಕ್ಕಳಿಂದ ಯಕ್ಷಗಾನ, ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವ 100ಕ್ಕೂ ಅಧಿಕ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದೆ. ಜ.11ರಂದು ಬೆಳಗ್ಗೆ 11ರಿಂದ ಶಿಲ್ಪಕಲಾ ಪ್ರಾತ್ಯಕ್ಷಿಕೆ, ಮೆಹಂದಿ ಬಿಡಿಸುವ ಸ್ಪರ್ಧೆ, ಬೀದಿ ನಾಟಕ, ಕಲಾ ಕಾರ್ಯಾಗಾರ, ಯಕ್ಷಗಾನ ಮೊದಲಾದವು ನಡೆಯಲಿವೆ. ಸಂಜೆ 3ಕ್ಕೆ ಬಿ.ಎಸ್.ದೇಸಾಯಿ ಅವರ ಶಿಷ್ಯ ವೃಂದದವರಿಂದ 5 ಅಡಿ ಎತ್ತರ, 20 ಅಡಿ ಉದ್ದದ ಪರಿಸರ ಜಾಗೃತಿಯ ಜಲವರ್ಣ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಪುನೀಕ್ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಚಿತ್ರಕಲಾ ಚಾವಡಿಯ ಗೌರವಾಧ್ಯಕ್ಷ ಗಣೇಶ ಸೋಮಯಾಜಿ, ಅಧ್ಯಕ್ಷ ಕೋಟಿಪ್ರಸಾದ್ ಆಳ್ವ, ಉಪಾಧ್ಯಕ್ಷ ಶರತ್ ಹೊಳ್ಳ, ಕೆಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ,ರಾಜ್ ಬೈಕಾಡಿ, ಜಿನೇಶ್ ಪ್ರಸಾದ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular