ಮಂಗಳೂರು : ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಶ್ರೀರಾಮನಿಗೆ ಅವಹೇಳನ ಮಾಡಿದ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಇದೀಗ ಜೆರೋಸಾ ಶಿಕ್ಷಣ ಸಂಸ್ಥೆ ವಿವಾದದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ದಯಾನಂದ ರಾಮಚಂದ್ರ ನಾಯ್ಕ ಅವರನ್ನು ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ದಿಢೀರ್ ವರ್ಗಾವಣೆ ಮಾಡಿದ್ದು ನೂತನ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾಗಿ ವೆಂಕಟೇಶ ಸುಬ್ರಾಯ ಪಟಗಾರ ಎಂಬುವವರನ್ನು ನೇಮಕ ಮಾಡಲಾಗಿದೆ.
ಜೆರೋಸಾ ಶಿಕ್ಷಣ ಸಂಸ್ಥೆಗೆ ನಿನ್ನೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿತ್ತು, ಈ ವಿಚಾರದಲ್ಲಿ ಶಿಕ್ಷಣ ಇಲಾಖೆ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದ್ದು ಡಿಡಿಪಿಐ ವಿರುದ್ದ ಅಸಮಾಧಾನ ಹೊರ ಹಾಕಿದ್ದರು, ಈ ವೇಳೆ ಮಾತನಾಡಿದ್ದ ರಮಾನಾಥ್ ರೈ, ‘ಸಮಸ್ಯೆ ಸರಿಪಡಿಸದ ಶಿಕ್ಷಣ ಇಲಾಖೆಯೇ ಜವಾಬ್ದಾರಿಯಾಗುತ್ತೆ ಎಂದಿದ್ದರು,ಜೊತೆಗೆ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಹೇಳಿದಂತೆ ಡಿಡಿಪಿಐ ಕ್ರಮ ಕೈಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಈ ವಿವಾದ ಬಗೆಹರಿಸುವಲ್ಲಿ ವಿಫಲವಾದ ಹಿನ್ನೆಲೆ ಡಿಡಿಪಿಐ ಅವರನ್ನು ಇದೀಗ ದಿಢೀರನೇ ವರ್ಗಾವಣೆ ಮಾಡಿದ್ದಾರೆ.
ಶ್ರೀರಾಮನಿಗೆ ಅವಹೇಳನ ಮಾಡಿದ ಆರೋಪ ಸಂಬಂಧ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿತ್ತು. ಇದೀಗ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನೇ ವರ್ಗಾವಣೆ ಮಾಡಲಾಗಿದೆ.


