ಮಂಗಳೂರು : ಮಂಗಳೂರಿನಲ್ಲಿ ದ.ಕ ಜಿಲ್ಲಾ ಪಂಚಾಯತ್ ಸುತ್ತೋಲೆ ಭಾರೀ ವಿವಾದ ಸೃಷ್ಟಿಸಿದ್ದು ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆ ಮಾಡದಂತೆ ದ.ಕ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂಬ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಸರಿನಲ್ಲಿರುವ ಅದೇಶ ವೈರಲ್ ಆಗಿದೆ.
ಕಾರ್ಕಳದ ಯಶಸ್ವಿ ನಾಗರಿಕ ಸೇವಾ ಸಂಘದ ಮುರಳೀಧರ್ ಎಂಬವರ ದೂರಿನ ಹಿನ್ನೆಲೆಯಲ್ಲಿ ಗ್ರಾ.ಪಂ ಸಾಮಾನ್ಯ ಸಭೆಗಳಲ್ಲಿ ಅಧಿಕಾರಿ ಮತ್ತು ಜನಪ್ರತಿನಿಧಿಗಳು ತುಳು ಭಾಷೆ ಬಳಕೆ ಮಾಡಬಾರದು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಲು ಪಂಚಾಯತ್ ಪಿಡಿಓಗಳು ನಿರ್ದೇಶನ ನೀಡಬೇಕು ನಿಯಮಾನುಸಾರ ಪರಿಶೀಲನೆ ನಡೆಸಿ ಅಗತ್ಯ ಕ್ರಮಕ್ಕೆ ಜಿ.ಪಂ ಸಿಇಓ ಆದೇಶ ಹೊರಡಿಸಿದ್ದಾರೆ. 2025 ಎಪ್ರಿಲ್ 22ರ ಆದೇಶ ಪ್ರತಿ ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು ಆದೇಶ ಪ್ರತಿ ವೈರಲ್ ಬೆನ್ನಲ್ಲೇ ಮಂಗಳೂರಿಗರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೇರಿ ಹಲವು ನಾಯಕರ ಆಕ್ಷೇಪ ವ್ಯಕ್ತಪಡಿಸಿದ್ದು ‘ತುಳು ಭಾಷೆ – ಕನ್ನಡ ನಾಡಿನ ಮಣ್ಣಿನ ಭಾಷೆ’
‘ನಮ್ಮ ಕರ್ನಾಟಕದಲ್ಲಿ ತುಳು ಮಾತನಾಡಬಾರದು ಎನ್ನುವ ಸರ್ಕಾರದ ಆದೇಶ!’ ‘ಹಾಗಾದರೆ, ಉರ್ದು ಭಾಷೆಯ ಬಳಕೆ ಸರಕಾರೀ ಕಡತದಲ್ಲಿ ಮಾಡಬಹುದೇ ? ಮಿಸ್ಟರ್ ಟ್ರೊಲ್ ಮಿನಿಸ್ಟರ್ ಎಲ್ಲಿದ್ದೀರಾ ?’ ಎಂದು ಸದಾನಂದ ಗೌಡ ಪ್ರಶ್ನೆ ಮಾಡಿದ್ದಾರೆ.ಬಳಿಕ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಸೇರಿ ಹಲವರಿಂದ ಸಾಮಾಜಿಕ ತಾಣಗಳಲ್ಲಿ ವಿರೋಧ ವ್ಯಕ್ತವಾಗಿದ್ದು ಈ ವಿಚಾರಕ್ಕೆ ಸರಕಾರ ಹಾಗೂ ಸಂಬಂಧಪಟ್ಟಇಲಾಖೆ ಉತ್ತರನೀಡಬೇಕಾಗಿದೆ.


