ಮಂಗಳೂರು ; ಗುಜರಾತ್ ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ. ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್ ಗಾರ್ಡ್ ತಂಡ ಹೆಲಿಕಾಪ್ಟರ್ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ.
ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜರಾತ್ ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ. ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ.
ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್ ಗಾರ್ಡ್ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.