Friday, January 16, 2026
Flats for sale
Homeಸಿನಿಮಾಮಂಗಳೂರು : ಕೊರಗಜ್ಜ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ: ದೈವದ ಬಗ್ಗೆ ರೀಲ್ಸ್ ಅಲ್ಲ -ಸುಧೀರ್...

ಮಂಗಳೂರು : ಕೊರಗಜ್ಜ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ: ದೈವದ ಬಗ್ಗೆ ರೀಲ್ಸ್ ಅಲ್ಲ -ಸುಧೀರ್ ಅತ್ತಾವರ್.

ಮಂಗಳೂರು : ಹೊಸವರ್ಷದ ಶುಭಾರಂಭದಂದು ‘ಸಾಂಗ್ಸ್ ಪ್ರೀಮಿಯರ್’ ಎನ್ನುವ ವರ್ಣರಂಜಿತ ಕಾರ್ಯಕ್ರಮದಲ್ಲಿ ತ್ರಿವಿಕ್ರಮ ಸಿನೆಮಾಸ್ ಮತ್ತು ಸಕ್ಸಸ್ ಫಿಲಂಸ್ ಬ್ಯಾನರ್ ಅಡಿಯ “ಕೊರಗಜ್ಜ” ಚಿತ್ರದ ಎಲ್ಲಾ ಹಾಡುಗಳನ್ನು ನಮ್ಮ ಚಿತ್ರತಂಡ ಸುಮಾರು ಮುನ್ನೂರಕ್ಕೂ ಹೆಚ್ಚು ಆಡಿಯೋ ಪ್ಲಾಟ್ ಫಾರ್ಮ್ ಗಳಲ್ಲಿ ಝೀ ಮ್ಯೂಜಿಕ್ ಮುಖೇನ ಹರಿಯಬಿಟ್ಟಿತ್ತು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಹಾಲಿಡೇ ಇನ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾವು ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆಯನ್ನು ಘೋಷಿಸಿದ್ದೆವೆಯೇ ಹೊರತು, ತ್ರಿವಿಕ್ರಮ ಸಪಲ್ಯ ನಿರ್ಮಾಣ ದಲ್ಲಿರುವ “ಕೊರಗಜ್ಜ” ಚಿತ್ರದ ದೈವದ ಬಗ್ಗೆ ರೀಲ್ಸ್ ಮಾಡಿ ಎಂದು ಹೇಳಿಲ್ಲ. ನಮ್ಮ ಮಾತನ್ನು ಕರ್ನಾಟಕದ ಕೆಲ ಭಾಗಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಿನಿಮಾದ ನಿರ್ದೇಶಕ ಸುಧೀರ್ ಅತ್ತಾವರ ತಿಳಿಸಿದ್ದಾರೆ.

ರೀಲ್ಸ್ ಎಂದರೆ ವೀಡಿಯೋ ತುಣುಕುಗಳು. ಈಗಾಗಲೇ ದೈವಗಳ ಬಗ್ಗೆ ಮತ್ತು ದೈವದ ಆರಾಧನಾ ಕ್ರಮಗಳಾದ ಕೋಲ, ನೇಮ, ತಂಬಿಲ, ಅಗೆಲು…ಹೀಗೆ ದೈವದ ವಿಚಾರವಾಗಿ ಸಹಸ್ರಾರು ರೀಲ್ಸ್ ಗಳು ಸೋಷಿಯಲ್ ಮೇಡಿಯಾಗಳಲ್ಲಿ ಹರಿದಾಡುತ್ತಿದೆ. ಹಾಗಿರುವಾಗ ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ ಏರ್ಪಡಿಸಿದರೆ ತಪ್ಪೇನು? ಈದಾಗ್ಯೂ ಅಶ್ಲೀಲ, ಅಸಂಬದ್ದ ಮತ್ತು ಅಪಹಾಸ್ಯ ಮಾಡುವ ರೀತಿಯ ರೀಲ್ಸ್ ಗಳ ವಿರುದ್ಧ ಕಾನೂನು ಕ್ರಮ ಎದುರಿಸಬೇಕಾದೀತು ಎನ್ನುವ ಎಚ್ಚರಿಕೆಯನ್ನು ನಾವೀಗಾಗಲೇ ಕೊಟ್ಟಿದ್ದೇವೆ ಎಂದು ಸುಧೀರ್ ಅತ್ತಾವರ ತಿಳಿಸಿದ್ದಾರೆ.

ನಾವು ಕಳಸ ದಲ್ಲಿ ಶೂಟಿಂಗ್ ಮಾಡಿದಾಗ, ದೈವ ನರ್ತಕರೇ ಲಾಂಗು- ಮಚ್ಚು ತಂದು ಬೆದರಿಸಿ, ಶೂಟಿಂಗ್ ನಿಲ್ಲಿಸಿ, ಇಲ್ಲದ ರಗಳೆ ಮಾಡಿ ಲಕ್ಷಾಂತರ ರುಪಾಯಿ ನಷ್ಟ ಮಾಡಿದ್ದರು. ಪ್ರತೀ ಬಾರಿ “ಕತ್ತಲೆ” ಯ ಹೆಸರನ್ನು ಹೇಳಿ ಬೆದರಿಸುತ್ತಿದ್ದರು. ಮೂರು ಭಾರಿ ರೌಡಿಗಳ ಧಾಳಿ ಆದಾಗೆಲ್ಲ ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿಯ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಈಗ ನಮ್ಮ ಹಾಡನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಾಡುಗಳಿಗೆ ರೀಲ್ಸ್ ಮಾಡುವ ಸ್ಪರ್ಧೆಗೆ ಆಕ್ಷೇಪಣೆ ಒಡ್ಡುತ್ತಿದ್ದಾರೆ. ನಮ್ಮ ಸಿನಿಮಾಗೆ ಪ್ರತೀ ಹಂತದಲ್ಲೂ ತೊಂದರೆ ಕೊಡುವುದು, ಆಕ್ಷೇಪಣೆ ಮಾಡುವುದು, ವಿರೋಧಿಸುವುದು ಹೀಗೆ ನಡೆಯುತ್ತಲೇ ಬಂದಿದೆ.ಆದರೆ ಕೊರಗಜ್ಜ ದೈವಾಶಿರ್ವಾದದಿಂದಲೇ ಇಂತಹ ಹಲವಾರು ಅಗ್ನಿ ಪರೀಕ್ಷೆಗಳನ್ನು ಧಾಟಿ ಈಗ ಚಿತ್ರ ಬಿಡುಗಡೆ ಮಾಡುವ ಹಂತಕ್ಕೆ ಬಂದಿದ್ದೇವೆ ಎಂದು ಸುಧೀರ್ ತಿಳಿಸಿದ್ದಾರೆ.

ತುಳುನಾಡಿನ ಕೆಲಭಾಗಗಳಲ್ಲಿ ಕೊರಗಜ್ಜ ಮತ್ತು ಇನ್ನಿತರ ದೈವಗಳ ಕೋಲದ ಸಮಯದಲ್ಲಿ, ದೈವದ ಪಾತ್ರ ಮಾಡುವ ವ್ಯಕ್ತಿಯ ಬಾಯಿಯಿಂದಲೇ ಅವಾಚ್ಯ, ಅಶ್ಲೀಲ ಪದಗಳನ್ನು ಹೇಳಿಸುವುದು ವಾಡಿಕೆ ಇದೆ. ಸಭ್ಯರ, ಸಣ್ಣ ಮಕ್ಕಳ ಮುಂದೆಯೇ ಕೋಲ ಸೇವೆಯ ಸಮಯದಲ್ಲಿ ಕೇಳಲು ಹೇಸಿಗೆ ಎನಿಸುವ ಅಶ್ಲೀಲ ಪದಗಳನ್ನು ವಾಡಿಕೆ ಅಥವ ಪಾರಂಪರಿಕೆ ಎನ್ನುವ ಕಾರಣದಿಂದ ಹೇಳುತ್ತಾ ಬಂದಿದ್ದಾರೆ. ಅಂತಹ ಪದ್ಧತಿಗಳ ಅಶ್ಲೀಲತೆಯನ್ನು, ಸಂಸ್ಕ್ರತಿಯ ನೆಪದಲ್ಲಿ ಕೀಳು ಪದಗಳನ್ನು ಕೋಲಸೇವೆಯ ವೇಳೆ ದೈವದ ಹೆಸರಿನಲ್ಲಿ ಹೇಳುವುದನ್ನು ನಾಗರಿಕ ಸಮಾಜ ಒಪ್ಪಬೇಕೇ ಎಂದವರು ಪ್ರಶ್ನಿಸಿದ್ದಾರೆ.

ಪರಂಪರೆಯ ಹೆಸರಿನಲ್ಲಿ‌ ದೈವಗಳಿಗೆ ಅವಹೇಳನಕಾರಿ ಅಥವ ಆಶ್ಲೀಲ ಪದ ಪ್ರಯೋಗಗಳ ಮುಖೇನ ಕೋಲಸೇವೆಯ ಕೈಂಕರ್ಯ ನಡೆಸುವುದು ಒಳ್ಳೆ ಸಂಸ್ಕ್ರತಿಯೇ?ಕೆಲಭಾಗಗಳ ಕೋಲದ ಸಮಯದಲ್ಲಿ ದೈವದ ವೇಷ ಹಾಕಿಕೊಂಡವರು ಜಾತಿಯ ಆಧಾರದಲ್ಲಿ‌ ಗೌರವ ಕೊಡುವಂತಹ ಪರಿಪಾಠ ನಾಗರಿಕ ಸಮಾಜ ಒಪ್ಪುವಂತಹ ಆಚರಣೆಯೇ? ಇದೆಲ್ಲ ಹಿಂದಿನಿಂದ ನಡೆದುಕೊಂಡು ಬಂದಿರುವ ಆಚರಣೆ ಎಂಬ ಸಮಜಾಯಿಸಬಹುದು. ಸತಿ ಸಹಗಮನ ಪದ್ದತಿ, ವಿಧವೆಗೆ ತಲೆ ಬೋಳಿಸಿ ಒಳಗೆ ಕೂರಿಸುವಂತ ದರಿದ್ರ ಪದ್ದತಿಗಳೂ ನಮ್ಮ ಸಮಾಜದಲ್ಲಿ ಇತ್ತು ತಾನೆ? ಅದೆಲ್ಲವನ್ನು ಕಿತ್ತೊಗೆದಾಗಿದೆ. ಹಾಗಿರುವಾಗ ಜಾತಿಪದ್ದತಿಯನ್ನು ಯಾಕೆ ಕೋಲದ ಸಮಯದಲ್ಲಿ ಅನುಸರಿಸಬೇಕು? ದೈವದ ಎದುರು ಎಲ್ಲಾ ಜಾತಿಯೂ ಒಂದೇ. ಮೇಲ್ಜಾತಿ ಕೀಳು ಜಾತಿ ಎನ್ನುವುದು ದೈವದ ಪರಿಕಲ್ಪನೆಯಂತೂ ಅಲ್ಲ. ದೈವವು ನಂಬುವ ಎಲ್ಲರಿಗೂ ಸೇರಿರುವ ಶಕ್ತಿ.ನಂಬಿದವರಿಗೆ ಇಂಬುಕೊಡುವ ಶಕ್ತಿ ಎಂದು ಸುಧೀರ್ ಅತ್ತಾವರ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular