ಮಂಗಳೂರು : ಜೂನ್ 29, 2023: ಕೇರಳ ಮೂಲದ ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡುತ್ತಿದ್ದ ಯುವತಿ ಸೇರಿದಂತೆ ಎಂಟು ಮಂದಿಯನ್ನು ಸಿಸಿಬಿ ಮತ್ತು ಕಾವೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬೊಂದೇಲ್‌ನ ಪ್ರೀತಂ, ಮೂಡುಶೆಡ್ಡೆಯ ಕಿಶೋರ್, ಮುರಳಿ, ಸುಶಾಂತ್ ಮತ್ತು ಅಭಿ ಬಂಧಿತರು. ಬಂಧಿತ ಯುವತಿ ಮೂಡುಬಿದಿರೆ ಮೂಲದವರು. ಕೇರಳ ಮೂಲದ ಉದ್ಯಮಿ ಮೊಯ್ದಿನ್ ಕುಂಞಿ ಅವರು ಸಂಪರ್ಕಕ್ಕೆ ಬಂದಿದ್ದ ಮೂಡುಬಿದಿರೆಯ ಯುವತಿಯೊಂದಿಗೆ ವಾಮಂಜೂರು ಸಮೀಪದ ಮೂಡುಶೆಡ್ಡೆಯ ರೆಸಾರ್ಟ್‌ಗೆ ಫೆ.16ರಂದು ತೆರಳಿದ್ದರು. ಇಬ್ಬರು ರೆಸಾರ್ಟ್‌ನಲ್ಲಿದ್ದಾಗ ಆರೋಪಿಗಳು ರಾತ್ರಿ ಕೊಠಡಿಗೆ ನುಗ್ಗಿ ಛಾಯಾಚಿತ್ರ ತೆಗೆಯುವುದಲ್ಲದೆ ಉದ್ಯಮಿಯಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆಗ ತನ್ನ ಬಳಿಯಿದ್ದ ನಗದನ್ನು ಕೊಟ್ಟು ಪರಾರಿಯಾಗಿದ್ದರೂ, ಮುಂದಿನ ದಿನಗಳಲ್ಲಿ ಆರೋಪಿಗಳು ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ರೀತಿ ಉದ್ಯಮಿ ಸುಮಾರು 10 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಒತ್ತಡ ತಾಳಲಾರದೆ ಕಾವೂರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


