ಮಂಗಳೂರು : ಬೆಂಗಳೂರಿನ ಕೋಗಿಲು ಬಡಾವಣೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್ಗಳನ್ನು ತೆರವುಗೊಳಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಕೇರಳದ ಧಮ್ಕಿ ಹಾಗೂ ತನ್ನ ಹೈಕಮಾಂಡ್ ಬೆದರಿಕೆಗೆ ಮಣಿದು ರಾಜ್ಯದ ಬಡವರಿಗಾಗಿ ನಿರ್ಮಿಸಿದ್ದ ಮನೆಗಳನ್ನೇ ವಲಸಿಗರಿಗೆ ನೀಡಲು ಮುಂದಾಗಿರುವುದು ಅಕ್ಷಮ್ಯವೆಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ನೆಲವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ವಲಸಿಗರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಬಿಟ್ಟು ಜನರ ತೆರಿಗೆ ದುಡ್ಡಲ್ಲೇ ಅವರಿಗೆ ಮನೆ ಕೊಡುವುದು ಯಾವ ಸೀಮೆಯ ಗ್ಯಾರಂಟಿ? ಕುರ್ಚಿ ಉಳಿಸಿಕೊಳ್ಳುವ ಒತ್ತಡದಲ್ಲಿರುವ ಸಿಎಂ, ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿರುವ ಡಿಸಿಎಂ ರಾಜ್ಯದ ಭದ್ರತೆಯನ್ನೇ ಕಡೆಗಣಿಸಿ ಹೈಕಮಾಂಡನ್ನು ತೃಪ್ತಿ ಪಡಿಸಲು ಹೊರಟಿದೆ. ಸದಾ ಹಿಂದೂಗಳ ವಿರುದ್ಧ ವಿಷ ಕಾರುವ ಕೇರಳ ಸರ್ಕಾರ ಹಾಗೂ ಭಾರತದ ವಿರುದ್ಧ ಭಯೋತ್ಪಾದನೆ ಮಾಡುವ ಪಾಕಿಸ್ತಾನ ಈ ವಲಸಿಗರ ಪರವಾಗಿ ನಿಂತಿರುವುದನ್ನು ನೋಡಿದರೆ ಇಲ್ಲಿನವರ ನೆಟ್ವರ್ಕ್ ಬಗ್ಗೆ ಅನುಮಾನ ಮೂಡುತ್ತಿದ್ದು, ಎನ್ಐಎ ತನಿಖೆಯಿಂದ ಮಾತ್ರ ಸತ್ಯ ಹೊರ ಬೀಳಬಹುದು ಎಂದರು.
ನಮ್ಮ ರಾಜ್ಯದಲ್ಲೇ ಲಕ್ಷಾಂತರ ಬಡವರು, ಪರಿಶಿಷ್ಟ ಮತ್ತು ಹಿಂದುಳಿದ ಸಮುದಾಯಗಳ ಜನರು ವಸತಿಗಾಗಿ ಅರ್ಜಿ ಸಲ್ಲಿಸಿ ವರ್ಷಾನುಗಟ್ಟಲೇ ಕಾಯುತ್ತಿದ್ದಾರೆ. ನಮ್ಮ ಕ್ಷೇತ್ರದ ಶಕ್ತಿನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ 930 ಮನೆ ನಿರ್ಮಾಣಕ್ಕೆ ಈ ಸರ್ಕಾರ ಅನುದಾನವೇ ನೀಡುತ್ತಿಲ್ಲ. ನಮ್ಮದೇ ಜಿಲ್ಲೆಯ ಜನಗಳು ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡಿದ್ದಾರೆ. ಕೊರಗರು, ದಲಿತ ಬಂಧುಗಳು ತಮ್ಮ ಹಕ್ಕುಪತ್ರಕ್ಕಾಗಿ, ಜಾಗಕ್ಕಾಗಿ ನಿರಂತರ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಇದುವರೆಗೆ ಇವೆಲ್ಲದರ ಬಗ್ಗೆ ತಿರುಗಿಯೂ ನೋಡದ ಕಾಂಗ್ರೆಸ್ ಸರಕಾರ ಅಕ್ರಮವಾಸಿಗಳಿಗೆ ಮಾತ್ರ ವಿಶೇಷ ಆದ್ಯತೆ ನೀಡುತ್ತಿರುವುದನ್ನು ಒಪ್ಪಲು ಸಾಧ್ಯವೇ ಇಲ್ಲವೆಂದರು.


