ಮಂಗಳೂರು : ಯಸ್ ಹೌದು ಇತ್ತಿಚ್ಚಿನ ದಿನಗಳಲ್ಲಿಅಂತೂ ಸೈಬರ್ ಕ್ರೈಂ ಖದೀಮರ ಹಾವಳಿ ಹೆಚ್ಚಾಗಿದೆ. ಹಲವು ರೀತಿಯಲ್ಲಿ ಜನರನ್ನು ವಂಚಿಸ್ತಾ ಇದ್ದ ಸೈಬರ್ ಕ್ರೈಂ ಆರೋಪಿಗಳು ಸದ್ಯ ದೇಶದ ಭದ್ರತಾ ವ್ಯವಸ್ಥೆಯ ಒಳಗೆ ನುಸುಳಿಕೊಂಡಿದ್ದಾರೆ. ಇಂಡಿಯನ್ ಮಿಲಿಟರಿ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ನಕಲಿ ಖಾತೆಯನ್ನೂ ತೆರೆದು, ಮಿಟಿಟರಿ ಸ್ಟೋರ್‌ನ ಜಿಎಸ್‌ಟಿ ನಂಬರ್ ಬಳಸಿ ಜನರನ್ನು ವಂಚಿಸಲು ಆರಂಭಿಸಿದ್ದಾರೆ. ಇಂತಹ ಒಂದು ಪ್ರಕರಣ ಮಂಗಳೂರಿನಲ್ಲೂ ನಡೆದಿದ್ದು, ಉದ್ಯಮಿಯೊಬ್ಬರು ಈ ವಂಚನೆಗೆ ಬಲಿಯಾಗದೆ ಬಚಾವ್ ಆಗಿದ್ದಾರೆ.



ಸೈಬರ್ ವಂಚಕರು ಹಲವಾರು ರೀತಿಯಲ್ಲಿ ವಂಚನೆ ಮಾಡುತ್ತಿದ್ದು, ದಿನ ದಿನ ಇಂತಹ ವಂಚನೆಯಿಂದ ಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಇಂತಹ ಹಲವು ಘಟನೆಗಳು ಬೆಳಕಿಗೆ ಬಂದಿದ್ದು ಕೊಟ್ಯಾಂತರ ರೂಪಾಯಿ ಈ ಖದೀಮರ ಪಾಲಾಗಿದೆ. ಆದ್ರೆ ಇದೀಗ ಇಂತಹ ವಿಚಾರಗಳನ್ನು ಜನರು ನಂಬೋದಿಲ್ಲ ಅಂತ ಈ ಸೈಬರ್ ವಂಚಕರು ಹೊಸ ದಾರಿಯನ್ನು ಹಿಡಿದಿದ್ದಾರೆ. ಇದಕ್ಕಾಗಿ ದೇಶದ ಸೈನಿಕರನ್ನು ಬಳಸಿಕೊಳ್ಳುತ್ತಿರುವುದು ಮಾತ್ರವಲ್ಲದೆ ಸೇನೆಯ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದಿರುವುದು ಬೆಳಕಿಗೆ ಬಂದಿದೆ.
ಮಂಗಳೂರಿನ ಉದ್ಯಮಿಯೊಬ್ಬರಿಗೆ ಟೋಪಿ ಹಾಕಲು ಯತ್ನ..!
ಮಂಗಳೂರಿನ ಬೈಕಂಪಾಡಿಯ ಗಣೇಶ್ ಇಂಜೀನಿಯರಿಂಗ್ ಇಂಡಸ್ಟ್ರಿ ಎಂಬ ಸಂಸ್ಥೆ ಈ ವಂಚನೆಯ ಜಾಲಕ್ಕೆ ಬಲಿಯಾಗುವುದರಲ್ಲಿ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದೆ. ಅಕ್ಟೋಬರ್ ತಿಂಗಳಲ್ಲಿ ಈ ಸಂಸ್ಥೆಯನ್ನು ಸಂಪರ್ಕಿಸಿದ ಸೇನಾಧಿಕಾರಿಯೊಬ್ಬರು ಅಂದಾಜು ಸುಮಾರು 7 ಲಕ್ಷ ಮೌಲ್ಯದ ವಸ್ತುಗಳಿಗೆ ಆರ್ಡರ್ ನೀಡಿದ್ದಾರೆ. ಈ ಬಗ್ಗೆ ಮಾತುಕತೆ ನಡೆಸಲು ಸಂಸ್ಥೆಯ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಆರ್ಡರ್ ನೀಡಿದ ಬಳಿಕ ವಿಳಾಸ ಹಾಗೂ ಜಿಎಸ್‌ಟಿ ನಂಬರ್ ಪರಿಶೀಲಿಸಿದ ಗಣೇಶ್ ಇಂಜೀನಿಯರಿಂಗ್ ಸಂಸ್ಥೆ ಇದೊಂದು ಅಧಿಕೃತ ಆರ್ಡರ್ ಅಂತ ನಂಬಿದೆ. ಹೀಗೆ ಆರ್ಡರ್ ಪೂರೈಕೆ ಮಾಡುವ ದಿನಾಂಕ ನಿಗದಿಯಾಗಿ ಲಾರಿಯಲ್ಲಿ ಐಟಂ ಸಾಗಿಸಿದ ಬಳಿಕವಷ್ಟೇ ಇದರ ಅಸಲಿ ಸತ್ಯ ಬಯಲಿಗೆ ಬಂದಿದೆ.
ಅನುಮಾನಕ್ಕೆ ಎಡೆ ಮಾಡಿಕೊಡದೆ ಡೀಲ್ ಮಾಡಿದ್ದ ವಂಚಕ..!
ಎಲ್ಲಾ ಪರಿಶೀಲಿಸಿದ್ದ ಇಂಜೀನಿಯರಿಂಗ್ ಸಂಸ್ಥೆಗೆ ಇದೊಂದು ಮೋಸದ ಜಾಲ ಅನ್ನೋದು ಗೊತ್ತೇ ಆಗಿರಲಿಲ್ಲ. ಮೊಬೈಲ್ ಡಿಪಿಯಲ್ಲಿ ಯುನಿಫಾರ್ಮ್ ಹಾಕಿರುವ ವ್ಯಕ್ತಿಯ ನೇಮ್ ಪ್ಲೇಟ್ ಕೂಡಾ ಕಾಣಿಸುತ್ತಿದ್ದು, ಇಂತಹ ವ್ಯಕ್ತಿ ಸೇನೆಯಲ್ಲಿ ಇರುವುದು ಕೂಡಾ ನಿಜ. ಇನ್ನು ಟ್ರೂ ಕಾಲರ್‌ನಲ್ಲೂ ಹೆಸರು ಡಿಸ್‌ಪ್ಲೇ ಆಗುವಾಗಲೂ ಶ್ರೀಕಾಂತ್ ಮಿಟಲಿರಿ ಆಫಿಸರ್ ಅಂತಾನೆ ಬಂದಿದೆ. ಆದ್ರೆ ಯಾವಾಗ ಆರ್ಡರ್ ಪೂರೈಕೆ ಮಾಡಬೇಕಾದ ಸಮಯ ಬಂದಾಗ ಮಿಲಿಟರಿ ಖಾತೆಯನ್ನು ಬೆನಿಫೀಶಿಯರಿ ಮಾಡಬೇಕು ಎಂಬಲ್ಲಿಂದ ಈ ವಂಚನೆ ತಿರುವು ಪಡೆದುಕೊಂಡಿದೆ. ತನ್ನ ಖಾತೆಗೆ ಆರಂಭದಲ್ಲಿ 3 ಲಕ್ಷದ 50 ಸಾವಿರ ಹಾಕುವಂತೆ ಹೇಳಿದ ವ್ಯಕ್ತಿ ಅದು ಮಿಲಿಟರಿ ಟೆಂಡರ್‌ನಲ್ಲಿ ಇರುವ ವಿಶೇಷ ವ್ಯವಸ್ಥೆ ಎಂದು ಹೇಳಿದ್ದ. ಅಷ್ಟೇ ಅಲ್ಲದೆ ಭಾವನಾತ್ಮಕವಾಗಿ ದೇಶ ಪ್ರೇಮದ ಮಾತನಾಡಿ ಇಂಜೀನಿಯರಿಂಗ್ ಸಂಸ್ಥೆಯ ಮಾಲೀಕರ ಮನವೊಲಿಸಿದ್ದ. ಹೀಗಾಗಿ ಸ್ವಲ್ಪ ಹಣ ಹಾಕಲು ಪ್ರಯತ್ನಿಸಿದ್ರೂ ಹಣ ಪಾವತಿಯಾಗಿರಲಿಲ್ಲ. ಇದೇ ವೇಳೆ ಆತನ ತರಾತುರಿಯಿಂದ ಅನುಮಾನಗೊಂಡು ಸೈಬರ್ ಕ್ರೈಂ ಕಚೇರಿ ಹಾಗೂ ಬ್ಯಾಂಕ್‌ಗೆ ಹೋಗಿ ವಿಚಾರಿಸಿದಾಗ ಈ ವಂಚಕನ ಅಸಲಿಯತ್ತು ಬಯಲಾಗಿದೆ.
ಇಂತಹ ವಂಚನೆಗೆ ಕಡಿವಾಣ ಹಾಕದೇ ಇದ್ರೆ ದೇಶಕ್ಕೆ ಮಾರಕ..!
ನಿಜವಾಗಿಯೂ ಇದೊಂದು ಆತಂಕಕಾರಿ ಬೆಳವಣಿಗೆಯಾಗಿದ್ದು, ವಂಚಕರು ದೇಶದ ಸೇನೆಯ ಹೆಸರಿನಲ್ಲೇ ನಕಲಿ ಖಾತೆ ತೆರೆದಿದ್ದಾರೆ. ಇದನ್ನು ಬ್ಯಾಂಕ್‌ಗಳು ಯಾವ ದಾಖಲೆಗಳ ಮೂಲಕ ತೆರೆದಿದ್ದಾರೆ ಅನ್ನೋದು ದೊಡ್ಡ ಪ್ರಶ್ನೆ. ಆಷ್ಟೇ ಅಲ್ಲದೆ ಆರೋಪಿ ಖಾತೆಯಲ್ಲಿ ಒಂದು ವರ್ಷದಲ್ಲಿ ಕೋಟ್ಯಾಂತರ ರೂಪಾಯಿ ಹಣ ವರ್ಗಾವಣೆ ಆಗಿದೆ. ಹಾಗಿದ್ರೂ ಆತನ ಐಟಿ ಇಡಿ ಮುಂತಾದ ಸಂಸ್ಥೆಗಳ ಕಣ್ಣಿಂದ ಹೇಗೆ ತಪ್ಪಿಸಿಕೊಂಡಿದ್ದಾನೆ ಅನ್ನೋದು ಕೂಡಾ ಪ್ರಶ್ನೆಯಾಗಿದೆ. ಒಟ್ಟಾರೆ ದೇಶದ ಭದ್ರತಾ ವ್ಯವಸ್ಥೆಯ ಹೆಸರಿನಲ್ಲೇ ವಂಚಕರು ಮಾಡುತ್ತಿರುವ ಈ ವಂಚನೆಗೆ ಕಡಿವಾಣ ಹಾಕದೇ ಇದ್ರೆ ಮುಂದೊಂದು ದಿನ ದೊಡ್ಡ ಅನಾಹುತ ನಡೆಯೋದು ಗ್ಯಾರೆಂಟಿ.ಒಟ್ಟಿನಲ್ಲಿ ಜೊತೆಯಲ್ಲಿ ಇದ್ದವರನ್ನು ನಂಬದ ಜನರು ವಂಚಕರ ಮಾತಿಗೆ ಮರುಳಾಗಿ ಕೋಟಿಗಟ್ಟಲೆ ಹಣಕಳೆದುಕೊಳ್ಳುವುದು ವಿಪರ್ಯಾಸ .


