Tuesday, March 31, 2026
Flats for sale
Homeಕ್ರೈಂಮಂಗಳೂರು: ಅನುಮಾನಾಸ್ಪದ ಸಾವು – ಪುತ್ರನಿಗೆ ವಿಷ ನೀಡಲಾಗಿದೆ ಎಂದು ತಂದೆಯ ಆರೋಪ, ತನಿಖೆಗೆ ಆಗ್ರಹ.

ಮಂಗಳೂರು: ಅನುಮಾನಾಸ್ಪದ ಸಾವು – ಪುತ್ರನಿಗೆ ವಿಷ ನೀಡಲಾಗಿದೆ ಎಂದು ತಂದೆಯ ಆರೋಪ, ತನಿಖೆಗೆ ಆಗ್ರಹ.

ಮಂಗಳೂರು : ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ 31 ವರ್ಷದ ಯುವಕನ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು, ಮೃತನ ಕುಟುಂಬಸ್ಥರು ಇದನ್ನು ಸಂಶಯಾಸ್ಪದ ಸಾವು ಎಂದು ಆರೋಪಿಸಿ ತನಿಖೆಗೆ ಒತ್ತಾಯಿಸಿದ್ದಾರೆ.

ಮೃತರನ್ನು ಸುದೀಪ್ ರೈ (31), ನೆಲ್ಯಾಡಿ ನಿವಾಸಿ ಎಂದು ಗುರುತಿಸಲಾಗಿದೆ. ಮಾರ್ಚ್ 29ರಂದು ಮುಂಜಾನೆ ಮಂಗಳೂರಿನ ಕೊಡಿಯಾಲ್ ಬೈಲ್‌ನ ಯೆನೆಪೋಯ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ವೈದ್ಯರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆಹಾರ ಪದಾರ್ಥದಲ್ಲಿ ವಿಷ ಪ್ರಾಶನವಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಡೆದಿದ್ದು, ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ.

ರಿಜಿಸ್ಟರ್ ಮದುವೆ ಬಳಿಕ ಬೆಳವಣಿಗೆಗಳು ಮೃತ ಸುದೀಪ್ ರೈ ಅವರು ಫೆಬ್ರವರಿ 17ರಂದು ಪುತ್ತೂರಿನ ಉಪ ನೋಂದಾವಣಿ ಕಚೇರಿಯಲ್ಲಿ ಕಾರ್ಕಳ ತಾಲೂಕಿನ ಸೌಮ್ಯ ಶೆಟ್ಟಿ ಎಂಬುವವರೊಂದಿಗೆ ರಿಜಿಸ್ಟರ್ ಮದುವೆಯಾಗಿದ್ದರು. ಬಳಿಕ ಕಾರ್ಕಳದಲ್ಲೇ ವಾಸವಾಗಿದ್ದು, ಈ ವಿಷಯ ಕುಟುಂಬಕ್ಕೆ ತಡವಾಗಿ ತಿಳಿದುಬಂದಿದೆ. ಮಾರ್ಚ್ 17ರಂದು ಸುದೀಪ್ ತಮ್ಮ ಮನೆಗೆ ಬಂದಿದ್ದ ವೇಳೆ, ನೆಲ್ಯಾಡಿ ಪೇಟೆಯಲ್ಲಿ ಸೌಮ್ಯ ಶೆಟ್ಟಿ ಅವರ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ ಎಂದು ಮೃತನ ತಂದೆ ಆರೋಪಿಸಿದ್ದಾರೆ. ಸಾರ್ವಜನಿಕರು ಸೇರಿದ್ದ ಹಿನ್ನೆಲೆಯಲ್ಲಿ ಬಳಿಕ ಇಬ್ಬರೂ ಅಲ್ಲಿಂದ ತೆರಳಿದ್ದಾರೆ.

ಮಾರ್ಚ್ 22ರಂದು ಸುದೀಪ್ ಅನಾರೋಗ್ಯದಿಂದ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೆಂದು ಮಾಹಿತಿ ನೀಡಲಾಗಿದೆ. ನಂತರ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿ, ಬಳಿಕ ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ಮಾರ್ಚ್ 24ರಂದು ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಅವರು ಮೃತಪಟ್ಟಿದ್ದಾರೆ.

ಕುಟುಂಬದ ಆರೋಪ : ವಿಷ ನೀಡಿ ಹತ್ಯೆ.
ಮೃತನ ತಂದೆ ಗಂಭೀರ ಆರೋಪ ಮಾಡಿದ್ದು, ಸೌಮ್ಯ ಶೆಟ್ಟಿ ತನ್ನ ಮಗನಿಗೆ ಮಾನಸಿಕ ಹಿಂಸೆ ನೀಡಿ ಆಹಾರದಲ್ಲಿ ವಿಷ ನೀಡಿ ಹತ್ಯೆ ನಡೆಸಿದ್ದಾಳೆ ಎಂದು ಹೇಳಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. “ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕು. ಆರೋಪಿಯನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆ ನೀಡಬೇಕು” ಎಂದು ಮೃತನ ತಂದೆ ತಾಯಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಕಾರ್ಕಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular