ಬೆಳ್ತಂಗಡಿ : ಶಾಸಕ ಹರೀಶ್ ಪೂಂಜಾ ಅವರು ಮೇ 22 ರ ಬುಧವಾರ ರಾತ್ರಿ 9:30 ರ ಸುಮಾರಿಗೆ ಬೆಳ್ತಂಗಡಿ ಪೊಲೀಸರ ಮುಂದೆ ಶರಣಾಗಿದ್ದು, ಅವರ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಠಾಣೆಯಲ್ಲಿ ವಿಚಾರಣೆ ನಡೆಸಲಾಯಿತು. ಪೊಲೀಸರು ಆರಂಭದಲ್ಲಿ ಪೂಂಜಾ ಅವರನ್ನು ವಿಚಾರಣೆಗಾಗಿ ಕರೆತರಲು ಅವರ ಮನೆಗೆ ಹೋಗಿದ್ದರು ಮತ್ತು ಬಂಧನದ ಕ್ರಮವನ್ನು ಪ್ರತಿಭಟಿಸಿ ಹಲವಾರು ಬಿಜೆಪಿ ಪಕ್ಷದ ಕಾರ್ಯಕರ್ತರು ಹರೀಶ್ ಪೂಂಜಾ ರವರ ಮನೆ ಮುಂದೆ ಹೈ ಡ್ರಾಮಾ ನಡೆದು ಪೋಲೀಸರ ವಾಹನಗಳನ್ನೂ ಸುತ್ತುವರಿದ ಪರಿಸ್ಥಿತಿ ಉದ್ಭವಿಸಿತ್ತು.
ಈ ವೇಳೆ ಸ್ಥಳದಲ್ಲಿದ್ದ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಮಧ್ಯಪ್ರವೇಶಿಸಿ ಪೂಂಜಾ ಅವರ ಮನೆಯಿಂದ ಪೊಲೀಸ್ ತಂಡವನ್ನು ಹಿಂಪಡೆಯುವಂತೆ ವೈಯಕ್ತಿಕವಾಗಿ ಪೊಲೀಸರಿಗೆ ಮನವಿ ಮಾಡಿದ್ದಾರೆ , ಪೂಂಜಾ ಅವರ ಉಪಸ್ಥಿತಿಯನ್ನು ಖುದ್ದಾಗಿ ಖಚಿತಪಡಿಸಿಕೊಳ್ಳುವುದಾಗಿ ಭರವಸೆ ನೀಡಿದರು. ವಿಚಾರಣೆಗಾಗಿ ಮುಂದಿನ ಮೂರು ದಿನಗಳಲ್ಲಿ ಠಾಣೆಗೆ ಹಾಜರಾಗುವಂತೆ ಪೂಂಜಾಗೆ ನೋಟಿಸ್ ಜಾರಿ ಮಾಡಿದ ಪೊಲೀಸರು ಸ್ಥಳದಿಂದ ತೆರಳಿದ್ದರು.ಅವರ ಭರವಸೆಯಂತೆ ಸಂಸದ ಕಟೀಲ್ ಅವರು ಶಾಸಕ ಪೂಂಜಾ ಅವರನ್ನು ಠಾಣೆಗೆ ಕಳುಹಿಸಿ, ಅಲ್ಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಯಿತು.
ಶಾಸಕರನ್ನು ಒಳಗೊಂಡ ಕಾನೂನು ವಿಷಯಗಳನ್ನು ಪರಿಹರಿಸುವ ಪ್ರಯತ್ನದ ಭಾಗವಾಗಿ ಬೆಳ್ತಂಗಡಿ ಪೊಲೀಸರು, ಡಿವೈಎಸ್ಪಿ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಸೇರಿದಂತೆ ಕೆಎಸ್ಆರ್ಪಿ ಸಿಬ್ಬಂದಿಯೊಂದಿಗೆ ಪೂಂಜಾ ಅವರ ನಿವಾಸಕ್ಕೆ ಆಗಮಿಸಿದ ನಂತರ ಪರಿಸ್ಥಿತಿ ಅನಾವರಣಗೊಂಡಿತು. ಇದು ಈ ಪ್ರದೇಶದಲ್ಲಿ ಭಾರೀ ವಿವಾದ ಮತ್ತು ಉದ್ವಿಗ್ನತೆಗೆ ಕಾರಣವಾಗಿತ್ತು.ಪೂಂಜಾ ಅವರನ್ನು ಪ್ರಕರಣ 58/2024, IPC ಕಲಂ 143, 147, 341, 504, 506 ಮತ್ತು 149 ರ ಅಡಿಯಲ್ಲಿ ವಿಚಾರಣೆಗೊಳಪಡಿಸಿ ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.


